ಸೈಪ್ರಸ್, ಎ.4: ಫಿಡೆ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಹಿಕಾರು ನಕಮುರಾರನ್ನು ಸೋಲಿಸಿದ ಜಾವೋಖಿರ್ ಸಿಂದಾರೋವ್ ಹ್ಯಾಟ್ರಿಕ್ ಗೆಲುವಿನೊಂದಿಗೆ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಐದು ಸುತ್ತಿನ ಸ್ಪರ್ಧೆಯ ನಂತರ 4.5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಉಜ್ಬೇಕಿಸ್ತಾನದ ಯುವ ಚೆಸ್ ತಾರೆ ಸಿಂದಾರೋವ್ ಅಮೆರಿಕದ ಆಟಗಾರ ಹಿಕಾಮುರಾ ವಿರುದ್ದ ಸಂಪೂರ್ಣ ಹಿಡಿತ ಸಾಧಿಸಿದರು. ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದ ನಕಮುರಾ ಸೋಲಿನ ಕಹಿ ಉಂಡರು.
ಓಪನ್ ವಿಭಾಗದಲ್ಲಿ ಮಥಾಯಸ್ ಬ್ಲೂಬೌಮ್‌ರನ್ನು ಮಣಿಸಿರುವ ಫ್ಯಾಬಿಯಾನೊ ಕರುಯಾನ 3.5 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಅನಿಶ್ ಗಿರಿ ಅವರು ಚೀನಾದ ವೀ ಯಿ ಎದುರು ಡ್ರಾ ಸಾಧಿಸಿದರು.
ಇದೇ ವೇಳೆ ಭಾರತದ ಚೆಸ್ ತಾರೆ ಆರ್. ಪ್ರಜ್ಞಾನಂದ ಸತತ ಎರಡನೇ ಬಾರಿ ಡ್ರಾ ಸಾಧಿಸಿದರು. ಐದನೇ ಸುತ್ತಿನಲಿ ಆಂಡ್ರೆ ಎಸಿಪೆಂಕೊ ಎದುರು ಡ್ರಾ ಸಾಧಿಸಿದ್ದಾರೆ.
ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ ಮೊದಲ ಸೋಲು ಕಂಡಿರುವ ದಿವ್ಯಾ ದೇಶಮುಖ್ ಅವರು ಟಾನ್ ರೆಂಗಿ ವಿರುದ್ಧ ಡ್ರಾ ಸಾಧಿಸಿ ಪುಟಿದೆದ್ದರು.

