ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 5943 ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹಿಸುವಲ್ಲಿ ಈ ವರ್ಷ ಕಳೆದ ಸಾಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಢೀಕರಣ ಮಾಡುವ ಮೂಲಕ ಸತತವಾಗಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಢೀಕರಣದಲ್ಲಿ ಕರ್ನಾಟಕ ರಾಜ್ಯವು ಕಳೆದ ವರ್ಷ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹಣೆಯಲ್ಲಿ ಉಂಟಾಗಿರುವ ಪ್ರಗತಿಯು ದಕ್ಷ ಆಡಳಿತ, ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿ ಮತ್ತು ಸುಧಾರಿತ ತೆರಿಗೆ ಸಂಗ್ರಹಣಾ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
2024-25ನೆ ಆರ್ಥಿಕ ವರ್ಷದಲ್ಲಿ ಇಲಾಖೆಯ ಇತಿಹಾಸದಲ್ಲಿಯೆ ಮೊದಲ ಬಾರಿಗೆ ಗ್ರಾಮ ಪಂಚಾಯತಿಗಳು 1272.54 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಮೂಲಕ ಚಾಲ್ತಿ ಬೇಡಿಕೆಯ ಶೇ.80ರಷ್ಟು ತೆರಿಗೆ ವಸೂಲಿ ಮಾಡಿ ದಾಖಲೆ ಮಾಡಿತ್ತು, 2025-26ನೆ ಸಾಲಿನಲ್ಲಿ 1382.57 ಕೋಟಿ ರೂ.ತೆರಿಗೆ ಸಂಗ್ರಹ ಮಾಡಲಾಗಿದ್ದು, 2024-25ನೆ ಸಾಲಿಗಿಂತ 110.04 ಕೋಟಿ ರೂ.ಅಧಿಕ ತೆರಿಗೆ ವಸೂಲಿ ಮಾಡಿದಂತಾಗಿದೆ. ಆ ಮೂಲಕ ಚಾಲ್ತಿ ಸಾಲಿನ ಬೇಡಿಕೆಯ ಶೇ.89ರಷ್ಟು ದಾಖಲೆಯ ತೆರಿಗೆ ಸಂಗ್ರಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳು, ತೆರಿಗೆ ವಸೂಲಾತಿ ಅಭಿಯಾನಗಳ ಮೂಲಕ ನಿರಂತರ ಶ್ರಮ ವಹಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿ ದಾಖಲೆ ಮಾಡಲಾಗಿದೆ. ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್‍ಗಳಿಂದ ಆರಂಭಿಸಿ ಎಲ್ಲ ಅಧಿಕಾರಿಗಳ ಶ್ರಮದಿಂದ ಈ ಫಲಿತಾಂಶ ಸಾಧ್ಯವಾಗಿದೆ. ಇದಕ್ಕಾಗಿ ನೌಕರರು ಹಾಗೂ ಅಧಿಕಾರಿ ವೃಂದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಿಂದ ಕರ ಸಂಗ್ರಹಣೆಯಲ್ಲಿ ಏರುಮುಖ ಕಾಣಬಹುದಾಗಿದೆ. ಸಂಗ್ರಹವಾದ ಪ್ರತಿಯೊಂದು ರೂಪಾಯಿಯೂ ಹಳ್ಳಿಗಳಲ್ಲಿನ ಸಾರ್ವಜನಿಕ ಕಾಮಗಾರಿಗಳು, ಉತ್ತಮ ಸೇವೆಗಳು ಮತ್ತು ಸ್ಥಳೀಯ ಅಭಿವೃದ್ಧಿಗಾಗಿ ಮರಳಿ ವಿನಿಯೋಗವಾಗುತ್ತಿದೆ. ಇದು ಗ್ರಾಮೀಣ ಭಾಗದ ಸರ್ವತೋಮುಖ ಪ್ರಗತಿಗೆ ನಾಂದಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಯಚೂರು ಜಿಲ್ಲೆ ಶೇ.129ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ವಿಕ್ರಮ ಸಾಧಿಸಿದೆ, ರಾಜ್ಯದ 11 ಜಿಲ್ಲೆಗಳು ಶೇ.100ಕ್ಕಿಂತಲೂ ಹೆಚ್ಚು ಕರ ಸಂಗ್ರಹಿಸುವ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

