Dailyhunt Logo
  • Light mode
    Follow system
    Dark mode
    • Play Story
    • App Story
ಹಾಕಿ ಟೂರ್ನಿ ನೆಪದಲ್ಲಿ ವಂಚನೆ; ಖೇಲೋ ಮಾಸ್ಟರ್ ಪದಾಧಿಕಾರಿಗಳ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಹಾಕಿ ಟೂರ್ನಿ ನೆಪದಲ್ಲಿ ವಂಚನೆ; ಖೇಲೋ ಮಾಸ್ಟರ್ ಪದಾಧಿಕಾರಿಗಳ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು : ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದಲ್ಲಿ ಖೇಲೋ ಮಾಸ್ಟರ್‌ ಸಂಸ್ಥೆಯ ಪದಾಧಿಕಾರಿಗಳ ವಿರುದ್ದ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಖೇಲೋ ಮಾಸ್ಟರ್‌ ಸಂಸ್ಥೆಯ ಖಜಾಂಜಿ ಎ.ಎನ್‌.

ಸೋಮಯ್ಯ, ಅಧ್ಯಕ್ಷ ಎಚ್‌.ಎಂ. ಪ್ರಸನ್ನ, ಕಾರ್ಯದರ್ಶಿ ಎನ್. ಮಧು ಹಾಗೂ ತಂಡದ ಮ್ಯಾನೇಜರ್‌ ಪಿ.ಕೆ. ತೇಜಶ್ರೀ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲ್ಪಿಸಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಬಡ ಹಾಕಿ ಆಟಗಾರರಿಗೆ ವಂಚಿಸಿದ್ದೀರಿ. ಇದೇ ರೀತಿ ಕ್ರಿಕೆಟಿಗರಿಗೆ ವಂಚಿಸಲಾಗುವುದೇ? ಸಾಧ್ಯವೇ ಇಲ್ಲ. ನಂಬಿಸಿ ಆಟಗಾರರಿಗೆ ವಂಚಿಸಿರುವುದರಿಂದ ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಹಾಕಿ ಆಟ, ಆದರೆ ಏನನ್ನೂ ಬಾಕಿ ಉಳಿಸಿಲ್ಲ (ಗೇಮ್‌ ಹಾಕಿ, ಕುಚ್‌ ನಹೀ ಬಾಕಿ) ಎಂದು ಮಾರ್ಮಿಕವಾಗಿ ನುಡಿಯಿತು.

ಅರ್ಜಿದಾರರ ಪರ ವಕೀಲರು, ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೊಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ 15 ಸಾವಿರ ರೂ. ವಸೂಲಿ ಮಾಡಲಾಗಿತ್ತು. ವೀಸಾಗೆ ಅಗತ್ಯವಾದ ದಾಖಲೆ ಒದಗಿಸಲು ಆಟಗಾರರು ವಿಫಲರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆನಂತರ, ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರನಿಂದ 1.50 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅದಕ್ಕೂ ವೀಸಾ ಪಡೆಯಲು ಆಟಗಾರರು ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೆ, ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಆಟಗಾರರನ್ನು ಕರೆದೊಯ್ಯಲಾಗಿತ್ತು ಎಂದರು.

ಈ ಹಂತದಲ್ಲಿ ನ್ಯಾಯಪೀಠ, ಭಾರತದಲ್ಲಿ ಕುಳಿತು ನೀವು ಲೋಕದರ್ಶನ ಮಾಡಿಸಿದ್ದೀರಿ ಎಂದು ಹೇಳಿತು.

ದೂರುದಾರರ ಪರ ವಕೀಲರು, ಕೊರಿಯಾಗೆ ಕರೆದೊಯ್ಯುವುದಾಗಿ ಹೇಳಿ ಮೊದಲು 15 ಮಂದಿಯಿಂದ ತಲಾ 15 ಸಾವಿರ ರೂ. ಸಂಗ್ರಹಿಸಲಾಗಿತ್ತು. ಆನಂತರ, ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವುದಾಗಿ ಹೇಳಿ 17 ಮಂದಿಯಿಂದ ತಲಾ 1.30 ಲಕ್ಷ ರೂ. ಬ್ಯಾಂಕ್‌ ವರ್ಗಾವಣೆ, 1.70 ಲಕ್ಷ ರೂ. ನಗದು ಸ್ವೀಕರಿಸಲಾಗಿದೆ. ಆಟಗಾರರ ಹೆಸರಿನಲ್ಲಿ ಪ್ರಾಯೋಜಕತ್ವದ ನೆಪದಲ್ಲೂ ಹಣ ಸಂಗ್ರಹಿಸಲಾಗಿದೆ. ಅದನ್ನು ಅರ್ಜಿದಾರರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ಎಷ್ಟು ಬಾರಿ ನೀವು ಜನರಿಗೆ ವಂಚಿಸಲು ಸಾಧ್ಯ? ಕೊರಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ. ನಿಮ್ಮನ್ನು ಬಿಟ್ಟಿದ್ದರೆ ಅವರನ್ನು ನೀವು ಬೇರೆಯದೇ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಿರಿ ಎನಿಸುತ್ತದೆ ಎಂದ ಹೇಳಿತಲ್ಲದೆ, ಸಂಗ್ರಹಿಸಲಾಗಿರುವ ಹಣವನ್ನು ಎಲ್ಲ ಆರೋಪಿಗಳು ಮರಳಿಸಬೇಕು ಎಂದು ತಿಳಿಸಿ, ಅರ್ಜಿ ವಿಲೇವಾರಿ ಮಾಡಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi