Dailyhunt
ಹಾರ್ಮುಝ್ ದಾಟಿದ ಭಾರತದ 7ನೇ LPG ಟ್ಯಾಂಕರ್: ಇರಾನ್‌ನಿಂದ ಭಾರತೀಯರಿಗೆ ವಿಶೇಷ ಸಂದೇಶ

ಹಾರ್ಮುಝ್ ದಾಟಿದ ಭಾರತದ 7ನೇ LPG ಟ್ಯಾಂಕರ್: ಇರಾನ್‌ನಿಂದ ಭಾರತೀಯರಿಗೆ ವಿಶೇಷ ಸಂದೇಶ

ಹೊಸದಿಲ್ಲಿ,ಎ.4: ಭಾರತ ಧ್ವಜಧಾರಿ ಎಲ್‌ಪಿಜಿ ಟ್ಯಾಂಕರ್ ಹಡಗು 'ಗ್ರೀನ್ ಸಾನ್ವಿ' ಶುಕ್ರವಾರ ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಈ ಬಗ್ಗೆ ಇರಾನ್ ಹೊಸದಿಲ್ಲಿಗೆ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಾಗಿ ಮುಂಬೈನಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ತಿಳಿಸಿದೆ.

ಎರಡೂ ದೇಶಗಳು ಹಂಚಿಕೊಂಡಿರುವ ಇತಿಹಾಸದಲ್ಲಿ ವಿಶೇಷವಾಗಿ ಗುಜರಾತ್ ರಾಜ್ಯವು ಆತ್ಮೀಯವಾದ ಸ್ಥಾನವನ್ನು ಹೊಂದಿದೆಯೆಂದು ಹೇಳಿದೆ. ಹಾರ್ಮುಝ್ ಜಲಸಂಧಿಯಿಂದ ಎಲ್‌ಪಿಜಿ ಟ್ಯಾಂಕರ್‌ನ ಪಯಣವು ಭಾರತದ ರಾಜತಾಂತ್ರಿಕತೆಗೆ ಸಂದ ಗೆಲುವೆಂದು ಬಣ್ಣಿಸಿ ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಅವರ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ಗೆ ಇರಾನ್‌ನ ಕಾನ್ಸುಲೇಟ್ ಜನರಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ನಾಲ್ಕು ಸಾವಿರ ವರ್ಷಗಳ ಹಿಂದೆ ಗುಜರಾತ್‌ನ ಲೋಥಾಲ್‌ನ ಪುರಾತನ ಬಂದರು, ಸಿಂಧೂ ಕಣಿವೆಯ ನಗರಗಳನ್ನು ಹಾಗೂ ಪರ್ಷಿಯನ್ ಕರಾವಳಿ ತೀರದ ಜೊತೆ ಸಂಪರ್ಕಿಸಿತ್ತು ಎಂದು ಇರಾನ್‌ನ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.

''ಈ ಶಾಶ್ವತವಾದ ನಾಗರಿಕತೆಯ ಬಾಂಧವ್ಯವನ್ನು ಕಟ್ಟಿಕೊಳ್ಳುವ ಮೂಲಕ ನಾವು ನಮ್ಮ ಸ್ನೇಹ ಹಾಗೂ ಸಹಕಾರದ ನಂಟುಗಳನ್ನು ಇನ್ನಷ್ಟು ಬಲಪಡಿಸಲು ಬದ್ಧತೆಯನ್ನು ಹೊಂದಿದ್ದೇವೆ'' ಎಂದು ಇರಾನ್ ಹೇಳಿದೆ.

46,650 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ)ವನ್ನು ಹೊತ್ತ ಗ್ರೀನ್‌ಸಾನ್ವಿ ಟ್ಯಾಂಕರ್ ಹಡಗು ಹಾರ್ಮುಝ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸುತ್ತಿದೆ. ಇರಾನ್ ಯುದ್ಧದ ಬಳಿಕ ಹಾರ್ಮುಝ್ ಜಲಸಂಧಿಯನ್ನು ದಾಟಿ ಭಾರತದ ಬಂದರುಗಳನ್ನು ತಲುಪಿದ 7ನೇ ಟ್ಯಾಂಕರ್ ಹಡಗು ಇದಾಗಿದೆ. ಸುಮಾರು 17 ಭಾರತೀಯ ಹಡಗುಗಳು ಹಾರ್ಮುಝ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಕ್ಕಿಹಾಕಿಕೊಂಡಿವೆ.

ಹಾರ್ಮುಝ್ ಜಲಸಂಧಿಯನ್ನು ಶತ್ರುದೇಶಗಳ ನೌಕೆಗಳಿಗೆ ನಿರ್ಬಂಧಿಸಿರುವ ಇರಾನ್, ಅದರ ಮಿತ್ರರಾಷ್ಟ್ರಗಳಾದ ಭಾರತ, ರಶ್ಯಾ, ಚೀನಾ, ಇರಾಕ್ ಹಾಗೂ ಪಾಕಿಸ್ತಾನಕ್ಕೆ ತೆರೆದಿರಿಸಿದೆ. ಈ ಮಹತ್ವದ ಇಂಧನ ಕಾರಿಡಾರ್ ಮೂಲಕ ಹಾದುಹೋಗುವ ನೌಕೆಗಳಿಗೆ ಟೋಲ್‌ಶುಲ್ಕ ವಿಧಿಸುವ ಯೋಜನೆಗೂ ಇರಾನ್ ಅನುಮೋದನೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi