Dailyhunt
ಹಳೆಯ ಎಚ್-1ಬಿ ನೀತಿಯಿಂದಾಗಿ ಭಾರತೀಯ ಪ್ರತಿಭೆಗಳು ಕೆನಡದತ್ತ ವಲಸೆ

ಹಳೆಯ ಎಚ್-1ಬಿ ನೀತಿಯಿಂದಾಗಿ ಭಾರತೀಯ ಪ್ರತಿಭೆಗಳು ಕೆನಡದತ್ತ ವಲಸೆ

ವಾಶಿಂಗ್ಟನ್, ಜು. 15: ಹಳೆಯ ಎಚ್-1ಬಿ ವೀಸಾ ನೀತಿಯಿಂದಾಗಿ ಭಾರೀ ಬೇಡಿಕೆಯಲ್ಲಿರುವ ಭಾರತೀಯ ಪ್ರತಿಭೆಗಳು ಈಗ ಅಮೆರಿದಿಂದ ಕೆನಡದತ್ತ ದೊಡ್ಡ ಸಂಖ್ಯೆಯಲ್ಲಿ ವಾಲುತ್ತಿದ್ದಾರೆ ಎಂದು ವಲಸೆ ಮತ್ತು ನೀತಿ ಪರಿಣತರು ಅಮೆರಿಕ ಸಂಸತ್‌ನಲ್ಲಿ ಹೇಳಿದ್ದಾರೆ.

ಉದ್ಯೋಗಾಧಾರಿತ ಗ್ರೀನ್ ಕಾರ್ಡ್ ಅಥವಾ ಖಾಯಂ ವಾಸ್ತವ್ಯವನ್ನು ನೀಡುವಾಗ ಅಮೆರಿಕವು ದೇಶಾವಾರು ಕೋಟವನ್ನು ಅನುಸರಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಪರಿಣತರು ಮಂಗಳವಾರ ಹೇಳಿದ್ದಾರೆ ಹಾಗೂ ಭಾರತೀಯ ಪ್ರತಿಭೆಗಳು ಅಮೆರಿಕದಿಂದ ಕೆನಡದತ್ತ ಹೋಗುವುದನ್ನು ತಡೆಯಲು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಸತ್ ಕಾಂಗ್ರೆಸ್ಸನ್ನು ಒತ್ತಾಯಿಸಿದ್ದಾರೆ.

ಈ ವಿಷಯದಲ್ಲಿ ಕಾಂಗ್ರೆಸ್ ಸುಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದರೆ, ಎಲ್ಲ ಮೂರು ಉದ್ಯೋಗಾಧಾರಿತ ಗ್ರೀನ್‌ಕಾರ್ಡ್ ವಿಭಾಗಗಳಲ್ಲಿ ಭಾರತೀಯ ಒಟ್ಟು ಹೊರಬಾಕಿ ಈಗಿನ 9,15,497ರಿಂದ 2030ರ ವೇಳೆಗೆ 21,95,795ಕ್ಕೆ ಏರುತ್ತದೆ ಎಂದು ನ್ಯಾಶನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿಯ ಕಾರ್ಯಕಾರಿ ನಿರ್ದೇಶಕ ಸ್ಟುವರ್ಟ್ ಆಯಂಡರ್‌ಸನ್ ಹೇಳಿದರು.

''ಈ ಸಂಖ್ಯೆ ಕಡಿಮೆಯಾಗಬೇಕು. ಇನ್ನೊಂದು ದಶಕದಲ್ಲಿ ಉದ್ಯೋಗಾಧಾರಿತ ಗ್ರೀನ್ ಕಾರ್ಡ್‌ಗಳಿಗಾಗಿ ಸರದಿಯಲ್ಲಿ ಕಾಯುವವರ ಸಂಖ್ಯೆ 20 ಲಕ್ಷವನ್ನೂ ಮೀರಿರುತ್ತದೆ'' ಎಂದು ಹೌಸ್ ನ್ಯಾಯಾಂಗ ಸಮಿತಿಗೆ ಒಳಪಟ್ಟ ವಲಸೆ ಮತ್ತು ಪೌರತ್ವ ಕುರಿತ ಉಪ ಸಮಿತಿಯೊಂದರ ಮುಂದೆ ಹೇಳಿಕೆ ನೀಡಿದ ಅವರು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi