ಹೊಸದಿಲ್ಲಿ: ಹರ್ಯಾಣ ಶಿಕ್ಷಕರ ಅರ್ಹತಾ ಪರೀಕ್ಷೆ (TET)ಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಜುಲೈ 4ರಂದು ರಾಜ್ಯದ 238 ಪರೀಕ್ಷಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಹರ್ಯಾಣ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳ ಮೇಲಿನ ಮುದ್ರೆಗಳು ಒಡೆದಿರುವುದು, ಒಎಂಆರ್ ಹಾಳೆಗಳ ಕ್ರಮಸಂಖ್ಯೆಗಳು ತಾಳೆಯಾಗದಿರುವುದು, ತಪ್ಪು ಪ್ರಶ್ನೆ ಪತ್ರಿಕೆಗಳ ವಿತರಣೆ ಹಾಗೂ ಮುದ್ರಣ ಮತ್ತು ಬೆರಳಚ್ಚು ದೋಷಗಳು ಕಂಡುಬಂದಿರುವುದರಿಂದ ಪರೀಕ್ಷೆಯು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.
"ಇಡೀ ಪರೀಕ್ಷಾ ಪ್ರಕ್ರಿಯೆಯೇ ಅಕ್ರಮವಾಗಿದೆ. ಸಾಂಗ್ಲೊ ಮತ್ತು ಸೂರಜ್ ಶಾಲೆಗಳು ಸೇರಿದಂತೆ ಚಕ್ರಿ ದಾದ್ರಿಯ ಕೆಲವು ಪರೀಕ್ಷಾ ಕೇಂದ್ರಗಳು ಹಾಗೂ ರೇವರಿಯ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್ ಗಳ ಮೇಲಿನ ಮುದ್ರೆಗಳು ಒಡೆದಿರುವುದು ಪತ್ತೆಯಾಗಿದೆ. ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯಿಂದ ಇದೇ ಸ್ಥಿತಿಯಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಪರೀಕ್ಷಾ ಮೇಲ್ವಿಚಾರಕರು ತಿಳಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಚಕ್ರಿ ದಾದ್ರಿಯ ವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ನೋಡಲ್ ಅಧಿಕಾರಿಯೂ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳ ಮುದ್ರೆಗಳು ಒಡೆದಿರುವುದನ್ನು ಒಪ್ಪಿಕೊಂಡಿದ್ದು, ಇದರ ಹೊಣೆಗಾರಿಕೆ ಶಿಕ್ಷಣ ಇಲಾಖೆಯ ಮೇಲಿದೆ ಎಂದು ತಿಳಿಸಿದ್ದಾರೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.
ಇದಲ್ಲದೆ, ರೇವರಿ ಮತ್ತು ಕೈಥಾಲ್‌ನ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಗಳು ಹಾಗೂ ಒಎಂಆರ್ ಹಾಳೆಗಳ ಮೇಲಿನ ಕ್ರಮಸಂಖ್ಯೆಗಳು ತಾಳೆಯಾಗದಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಅವರು ಆಪಾದಿಸಿದ್ದಾರೆ.
ಈ ಬೆಳವಣಿಗೆಗಳಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಆತಂಕದಲ್ಲಿದ್ದು, ಸ್ನಾತಕೋತ್ತರ ಪದವಿ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.

