Wednesday, 03 Mar, 9.59 pm ವಾರ್ತಾಭಾರತಿ

ಮುಖಪುಟ
ಹವಾಮಾನ ಕಾರ್ಯಕರ್ತ ಶುಭಂ ಚಾಂಧುರಿಗೆ ಬಾಂಬೆ ಹೈಕೋರ್ಟ್‌ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು

ಪಣಜಿ,ಮಾ.3: ರೈತರ ಪ್ರತಿಭಟನೆಯ ಬೆಂಬಲಾರ್ಥ ಸೃಷ್ಟಿಸಿದ್ದೆನ್ನಲಾದ ಟೂಲ್‌ಕಿಟ್ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿರುವ ಗೋವಾದ ಹವಾಮಾನ ಕಾರ್ಯಕರ್ತ ಶುಭಂ ಚಾಂಧುರಿ(29) ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯದ ಪಣಜಿ ಪೀಠವು ಬುಧವಾರ ಟ್ರಾನ್ಸಿಟ್ ಅಥವಾ ಪ್ರಯಾಣಕಾಲದ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. 50,000 ರೂ.ಗಳ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆಗಳನ್ನು ಒದಗಿಸುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿದೆ.

ಚಾಂಧುರಿ ಬಂಧನದ ಭೀತಿಯನ್ನು ವ್ಯಕ್ತಪಡಿಸಿರುವುದಕ್ಕೆ ಸಮರ್ಥನೆಯಿದೆ ಎಂದು ಅಭಿಪ್ರಾಯಿಸಿದ ಏಕಸದಸ್ಯ ಪೀಠದ ನ್ಯಾ.ಎಂ.ಎಸ್.ಜವಳಕರ್ ಅವರು ಬಂಧನದ ವಿರುದ್ಧ ತಾತ್ಕಾಲಿಕ ರಕ್ಷಣೆಯನ್ನು ನೀಡಿದರು.

ವ್ಯಕ್ತಿಯು ಬಂಧಿಸಲ್ಪಡುವ ಸಾಧ್ಯತೆಯಿರುವ ರಾಜ್ಯದಿಂದ ಬೇರೆಯಾದ ರಾಜ್ಯದಲ್ಲಿ ಆತನ/ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಅಥವಾ ದಾಖಲಾಗುವ ಸಾಧ್ಯತೆಯಿದ್ದರೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಲಾಗುತ್ತದೆ. ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಆರೋಪಿಗೆ ಬಂಧನದ ವಿರುದ್ಧ ತಾತ್ಕಾಲಿಕ ರಕ್ಷಣೆಯನ್ನು ನೀಡುತ್ತದೆ ಮತ್ತು ಆತ/ಆಕೆ ಪ್ರಕರಣ ದಾಖಲಾದ ರಾಜ್ಯದಲ್ಲಿಯ ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಿ ಕ್ರಮಬದ್ಧವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಬಹುದು.

ಹವಾಮಾನ ಬದಲಾವಣೆಯ ವಿರುದ್ಧ ಜಾಗತಿಕ ಆಂದೋಲನ 'ಎಕ್ಸ್ಟಿಂಕ್ಷನ್ ರೆಬೆಲಿಯನ್'ನ ಸದಸ್ಯರಾಗಿರುವ ಚಾಂಧುರಿ ವಿರುದ್ಧ ಐಪಿಸಿಯ ವಿವಿಧ ಕಲಮ್‌ಗಳಡಿ ದೇಶದ್ರೋಹ,ವಿವಿಧ ಸಮುದಾಯಗಳ ನಡುವೆ ದ್ವೇಷಕ್ಕೆ ಪ್ರಚೋದನೆ ಮತ್ತು ಕ್ರಿಮಿನಲ್ ಒಳಸಂಚು ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ.

ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿ,ನ್ಯಾಯವಾದಿ ನಿಕಿತಾ ಜಾಕೋಬ್ ಮತ್ತು ಶಂತನು ಮುಲುಕ್ ಅವರು ಟೂಲ್‌ಕಿಟ್ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top