Tuesday, 24 Nov, 12.10 am ವಾರ್ತಾಭಾರತಿ

ಮುಖಪುಟ
ಹಿಂದುಳಿದ ವರ್ಗ ಗುರುತಿಸಲು ಜಾತಿ ಮಾನದಂಡ ಅಲ್ಲ!

ಕೆ. ಎನ್. ಲಿಂಗಪ್ಪ (ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಜಾತಿಯನ್ನು ಆಧರಿಸಿಯೇ ಮೀಸಲಾತಿ ನೀಡಲಾಗುತ್ತಿದೆ ಎಂದು ಭ್ರಮೆಗೆ ಬಿದ್ದ, ಜಾತಿ ಮತ್ತು ಜಾತೀಯತೆಯನ್ನು ಆಂತರ್ಯದಲ್ಲಿ ಆರಾಧಿಸುವ ಕುಲೀನ ಜಾತಸ್ಥರು ಮೀಸಲಾತಿಯನ್ನು ವಿರೋಧಿಸಿಕೊಂಡೇ ಬಂದವರು. 1992ರಲ್ಲಿ ಮಂಡಲ್ ವರದಿ ಜಾರಿ ವಿರೋಧಿಸಿ ಮಂಡಲ್‌ಗೆ ಎದುರಾಗಿ ಕಮಂಡಲ ಮುಂದಿರಿಸಿ ಬೊಬ್ಬಿರಿದುದು ಐತಿಹಾಸಿಕ ಸಾಕ್ಷಿಯಾಗುಳಿದಿದೆ. ಆದರೆ, ಕಾಲ ಬದಲಾಗಿ, ಮೀಸಲಾತಿ ವಿರೋಧಿಸಿದ ಜನರೇ ಇಂದು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಅದಕ್ಕೆ ಕಾರಣ, 2019ರಲ್ಲಿ ಸಂವಿಧಾನದ ವಿಧಿಗಳಿಗೆ ತಿದ್ದುಪಡಿ ಮಾಡಿ, ಕುಲೀನ ಕಸುಬುದಾರರಲ್ಲಿ, ಆರ್ಥಿಕ ದುರ್ಬಲರಿಗೆ (EWS) ಶೇ.10ರಷ್ಟು ಮೀಸಲಾತಿ ನೀಡಿ ಕೇಂದ್ರ ಸರಕಾರ ಹೊರಡಿಸಿದ ಆದೇಶ. ತಮಗೆ ಒಳಿತಾದ ಈ ಆದೇಶವನ್ನು ಕುಯ್ಗುಡದೆ ಎಲ್ಲ ಇಂದ್ರಿಯಗಳನ್ನು ಮುಚ್ಚಿ ಆಸ್ವಾದಿಸುತ್ತಿರುವ ಪರಿಯನ್ನು ಆಷಾಢಭೂತಿಯನ್ನದೆ ಮತ್ತೇನನ್ನಬೇಕು?


ಜಾತಿ, ಅದು ಬರೀ ಭೂತವಲ್ಲ; ಅದು ಪೆಡಂಭೂತ! ಜಾತಿಯಿಂದಾಗಿ ಹತ್ತು-ಹಲವಾರು ಸಂಕಷ್ಟಕ್ಕೆ ಒಳಗಾಗಿರುವವರು ಮಾತ್ರ ಕೆಳಜಾತಿಯವರು. ಇದು ಸಮಾಜ ಅಧ್ಯಯನ ಕಾರರಿಂದ ದೃಢಪಟ್ಟಿರುವ ಅಂಶ. ಜಾತಿ ಎಂಬುದು, ವಂಚನೆ ಮತ್ತು ಶೋಷಣೆಗೆ ಗುರಿಯಾಗಿರುವ ಒಂದು ಅಸಮತೋಲನ ವ್ಯವಸ್ಥೆ. ಈ ಅಸಮಾನತೆ ತಳಸಮುದಾಯಗಳನ್ನು ಮಾನಸಿಕವಾಗಿ ಕುಗ್ಗಿಸಿದೆ. ಅಲಕ್ಷಿತ ಈ ಜಾತಿಗಳ ಉನ್ನತಿಗೆ ಹಿಂದಿನ ಎರಡು ಶತಮಾನಗಳಿಂದ ಸಮಾಜ ಸುಧಾರಕರು ಪ್ರಯತ್ನಿಸಿದರಾದರೂ, ಅದು ನಿರೀಕ್ಷಿತ ಫಲಿತಾಂಶ ಪಡೆದಿಲ್ಲ ಎಂಬುದು ಅಷ್ಟೇ ಸತ್ಯ!

ಎರಡು ಶತಮಾನಗಳ ಅವಧಿಯ ಪರಕೀಯ ಆಡಳಿತದಲ್ಲಿ ತಳಸಮುದಾಯ ಗಳ ಪುರೋಭಿವೃದ್ಧಿಗೆ ದೇಶವ್ಯಾಪಿ, ಕೆಲವೊಂದು ಸಂಸ್ಥಾನಗಳನ್ನು ಹೊರತು ಪಡಿಸಿ, ಕಾರ್ಯಯೋಜನೆಗಳು ರೂಪಿತಗೊಳ್ಳಲಿಲ್ಲ. ಶಿಕ್ಷಣ ಮತ್ತು ಉದ್ಯೋಗ ಅವುಗಳ ಪಾಲಿಗೆ ಗಗನ ಕುಸುಮವಾಗಿಯೇ ಇದ್ದವು. ಸ್ವತಂತ್ರ ಭಾರತದಲ್ಲಿ ಸಂವಿಧಾನದ ನಿರ್ಮಾಪಕರು ಈ ನಿಟ್ಟಿನಲ್ಲಿ ಸಂಕಲ್ಪಿಸಿ, ಬಹಿಷ್ಕೃತರಾಗಿ ಊರ ಹೊರಗೆ ಬದುಕು ಕಟ್ಟಿಕೊಂಡವರಿಗೆ(ಧರ್ಮಶಾಸ್ತ್ರ ನಿಯಮ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಹಾರಾತ್ಮಕ ಆದ್ಯತೆ ನೀಡಲು ಸಂವಿಧಾನದಲ್ಲಿ ಅವಕಾಶವಿತ್ತರು. ಅಂತೆಯೇ, ಉಳಿದ ಹಿಂದುಳಿದ ವರ್ಗಗಳ ನಾಗರಿಕರಿಗೂ ಇದೇ ಮಾದರಿಯಲ್ಲಿ ಅವಕಾಶ ಕಲ್ಪಿಸಲು ಸಹ ಸಂವಿಧಾನದ ನಿರ್ಮಾತೃಗಳು ಕಾರಣರಾದರು. ಈ ಪರಿಹಾರಾತ್ಮಕ ಆದ್ಯತೆಯೇ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಭಾಗವಾಗಿ, ಸಂವಿಧಾನದಲ್ಲಿ ಸ್ಥಾನ ಪಡೆದುಕೊಂಡಿತು.

ಸಂವಿಧಾನದ ಕರಡಿನಲ್ಲಿಯೇ ಇತರ ಹಿಂದುಳಿದ ನಾಗರಿಕರಿಗೂ ಸರಕಾರದ ಹುದ್ದೆಗಳ ಆಯ್ಕೆಯಲ್ಲಿ ಮೀಸಲಾತಿ ನೀಡಬೇಕೆಂದು ಸಂವಿಧಾನ ಕರ್ತೃಗಳು ನಿರ್ಧರಿಸಿ, ಕರಡಿನ ವಿಧಿ10(4)ರಲ್ಲಿ ಸೂಚಿಸಲ್ಪಟ್ಟ ಪ್ರಯುಕ್ತ, ಮುಂದೆ ಅದು ಸಂವಿಧಾನದ ವಿಧಿ16(4)ಎಂದಾಯಿತು. ಸಂವಿಧಾನ ಜಾರಿಯ ನಂತರ, ಪರಿಶಿಷ್ಟ ವರ್ಗಗಳು ಎಂದು ಗುರುತಾದವರಿಗೆ, 1950ರಲ್ಲಿಯೇ ರಾಷ್ಟ್ರಪತಿಗಳಿಂದ ಅಧ್ಯಾದೇಶವಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ಸಿಕ್ಕಿದೆ.

ಹಿಂದುಳಿದ ನಾಗರಿಕರಿಗೂ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇದ್ದಾಗ್ಯೂ ರಾಷ್ಟ್ರ ಮತ್ತು ರಾಜ್ಯಗಳೂ ಮುಂದಾಗಲಿಲ್ಲ ಎಂಬಷ್ಟರಲ್ಲಿ, ಅಂದಿನ ಮದ್ರಾಸ್ ರಾಜ್ಯ ಆ ನಿಟ್ಟಿನಲ್ಲಿ ಅಡಿ ಇಟ್ಟಿತು. ಮದ್ರಾಸ್ ಸರಕಾರ, ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳ ಶಿಕ್ಷಣಕ್ಕಾಗಿ ಸ್ಥಾನ ತುಂಬಲು, ಪ್ರತಿ 14 ಸ್ಥಾನಗಳಿಗೆ ಅನ್ವಯಿಸುವಂತೆ ಆಯ್ಕೆ ಸಮಿತಿಯು, 1.ಬ್ರಾಹ್ಮಣರಲ್ಲದ ಹಿಂದೂಗಳು-6, 2. ಹಿಂದುಳಿದ ಹಿಂದೂಗಳು-2, 3. ಬ್ರಾಹ್ಮಣ-2, 4. ಹರಿಜನ-2, 5. ಕ್ರೈಸ್ತ-1, 6. ಮುಸ್ಲಿಂ-1 ಎಂಬ ಸೂತ್ರದಡಿ ಮೀಸಲಾತಿಗೆ ಒಳಪಡಿಸಿ ಆಯ್ಕೆಮಾಡಬೇಕೆಂದು ಆದೇಶ ಹೊರಡಿಸಿತು. ಇದು ಮುಂದೆ ಕಮ್ಯುನಲ್ ಆದೇಶ ಎಂದು ಕಳಂಕಿತಗೊಂಡಿತು. ಸರಕಾರದ ಈ ಆದೇಶ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಚಂಪಕಮ್ ದೊರೈರಾಜ್ ಎಂಬವರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ 27.7.1950ರಂದು ತೀರ್ಪು ನೀಡಿ, ಆದೇಶವು ಧರ್ಮ, ಜಾತಿ ಮತ್ತು ಜನಾಂಗೀಯವಾದಿಯಾಗಿದ್ದು, ವಿಧಿ 15(1) ಮತ್ತು ವಿಧಿ 29(2)ರ ಉಲ್ಲಂಘನೆ ಎಂದು ತೀರ್ಪು ನೀಡಿತು. ಈ ತೀರ್ಪಿನಿಂದ ಕಂಡುಬಂದ ಒಂದು ಅಂಶವೆಂದರೆ, ಸಂವಿಧಾನದ ಆಶಯದಂತೆ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದರೂ, ಧರ್ಮ ಮತ್ತು ಜಾತಿಗಳೇ ಹಿಂದುಳಿದ ವರ್ಗಗಳ ಆಯ್ಕೆಗೆ ಮಾನದಂಡವಲ್ಲ ಎಂಬುದು. ಹಾಗಾದರೆ ಹಿಂದುಳಿದವರು ಯಾರು? ಆ ವರ್ಗಗಳ ಆಯ್ಕೆಗೆ ಮತ್ಯಾವ ಮಾನದಂಡ ಅನುಸರಿಸಬೇಕು ಎಂಬುದು ಮುನ್ನೆಲೆಗೆ ಬಂದು, ಪ್ರಾಮುಖ್ಯತೆ ಪಡೆದುಕೊಂಡಿದ್ದೇ ಅಲ್ಲದೆ, ಸಂವಿಧಾನದ ಮೊದಲನೇ ತಿದ್ದುಪಡಿಗೂ ಕಾರಣವಾಗಿ, ವಿಧಿ 15ಕ್ಕೆ ಉಪವಿಧಿ(4) ಅನ್ನು ಸೇರ್ಪಡೆ ಮಾಡುವಂತಾಯಿತು. ವಿಧಿ16(4)ರಂತೆ, ಹಿಂದುಳಿದ ವರ್ಗಗಳ ನಾಗರಿಕರಿಗೆ ನೌಕರಿ ಅಥವಾ ಹುದ್ದೆಗಳನ್ನು ಮೀಸಲಿಡಲು, ಅಂತಹ ವರ್ಗಗಳನ್ನು ಗುರುತಿಸಲು ಅನುಕೂಲವಾಗುವಂತೆ, ವಿಧಿ 15(4)ರಲ್ಲಿ 'ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕ ವರ್ಗಗಳು' ಎಂಬ ಪದಗುಚ್ಛಗಳನ್ನು ಸೇರಿಸಲಾಯಿತು.

ವಿಧಿ 15(4)ರ ಸೇರ್ಪಡೆ ನಂತರವಷ್ಟೇ, ಕೇಂದ್ರ ಸರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ವರ್ಗಗಳನ್ನು ಗುರುತಿಸಲು 1953ರಲ್ಲಿ ಕಾಕಾ ಕಾಲೇಲ್ಕರ್ ಆಯೋಗ ನೇಮಿಸಿತು. ''ಜಾತಿ ವ್ಯವಸ್ಥೆಯಲ್ಲಿ ಕೆಳಸ್ತರದ ಸಾಮಾಜಿಕ ಸ್ಥಿತಿಯಲ್ಲಿವೆ'' ಎಂದು 2,399 ಹಿಂದುಳಿದ ಜಾತಿಗಳನ್ನು ಗುರುತಿಸಿ, ಆಯೋಗ 1955ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿತು. ಅಚ್ಚರಿ ಎಂದರೆ, ಜಾತಿಯನ್ನೇ ಪ್ರಮುಖವಾಗಿ ಆಧರಿಸಿ ಸಿದ್ಧಪಡಿಸಿದ ವರದಿ ಎಂದು ಆಯೋಗದ ಅಧ್ಯಕ್ಷರೇ ಹೇಳಿಕೊಂಡಿರುವುದು ವರದಿಯಲ್ಲೇ ದಾಖಲಾಗಿದೆ. ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯನ್ನೇ ಮೂಲ ಮಾನದಂಡವಾಗಿರಿಸಿಕೊಂಡು ಆಯೋಗ ವರದಿ ಸಿದ್ಧಪಡಿಸಿದೆ ಎಂಬ ಕಾರಣ ನೀಡಿ ಕೇಂದ್ರ ಸರಕಾರ ವರದಿಯನ್ನು ತಿರಸ್ಕರಿಸಿತು. ಮುಂದೆ, ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳ ಬಗ್ಗೆ ಅದು ಹೊಂದಿದ್ದ ಅವಜ್ಞೆಯ ಕಾರಣ 2ನೇ ಆಯೋಗ ರಚನೆಗೆ ಮುಂದಾಗದೆ ಮೌನಕ್ಕೆ ಶರಣಾಯಿತು.

ಜನವರಿ, 1979ರಲ್ಲಿ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ 2ನೇ ಹಿಂದುಳಿದ ಆಯೋಗ ರಚಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತು. ಆಯೋಗ 4 ಸಾಮಾಜಿಕ ಮಾನದಂಡಗಳನ್ನು ಅಳವಡಿಸಿಕೊಂಡು, ಹಿಂದುಳಿದ ವರ್ಗಗಳೆಂದು 3,743 ಜಾತಿಗಳನ್ನು ಪಟ್ಟಿಮಾಡಿತು. ಪರಸ್ಪರ ಜಾತಿಗಳ ತುಲನೆ, ಸಾಮಾಜಿಕ ಹಿಂದುಳಿದಿರುವಿಕೆ, ದೈಹಿಕ ಶ್ರಮದ ದೈನಂದಿನ ಬದುಕು, ಬಾಲ್ಯ ವಿವಾಹ ಮತ್ತು ಮಹಿಳೆಯರ ಶ್ರಮಾಧಾರಿತ ಕೆಲಸ (ಶೇ. 25ಕ್ಕಿಂತ ಹೆಚ್ಚು) ಎಂಬ ಈ 4 ಮಾನದಂಡಗಳ ಅಂಶಗಳು ಸಾಮಾಜಿಕ ಹಿಂದುಳಿದಿರುವಿಕೆಗೆ ಕಾರಣ ಎಂದು ಆಯೋಗ ತಿಳಿಸಿತ್ತು. ಈ ಸಾಮಾಜಿಕ ಮಾನದಂಡಗಳು ಆ ವರ್ಗಗಳನ್ನು ಗುರುತಿಸುವಲ್ಲಿ ಮಹತ್ವ ಪಡೆದುಕೊಂಡಿವೆ. ಸಾಮಾಜಿಕ ಮಾನದಂಡಗಳ ಜೊತೆಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾನದಂಡಗಳನ್ನೂ ಅಳವಡಿಸಿ ಸಿದ್ಧಪಡಿಸಿದ ವರದಿಯನ್ನು, ಆಯೋಗ 30.12.1980ರಂದು ಸರಕಾರಕ್ಕೆ ಸಲ್ಲಿಸಿತು. ವರದಿ ಜಾರಿ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಅಳವಡಿಸಿಕೊಂಡ ಸಾಮಾಜಿಕ ಮಾನದಂಡಗಳನ್ನು ಬಹುಮುಖ್ಯ ವಾಗಿ ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡು ವರದಿ ಜಾರಿಯನ್ನು ಎತ್ತಿಹಿಡಿಯಿತು.

ಹಾಗೆಯೇ, ರಾಜ್ಯಗಳಲ್ಲಿ ಒಂದಾದ ಕರ್ನಾಟಕ(ಅಂದಿನ ಮೈಸೂರು) ರಾಜ್ಯ ಸರಕಾರ 1959ರ ಮೇ ಮತ್ತು ಜುಲೈ ತಿಂಗಳಲ್ಲಿ ಕಾಲೇಜು ಶಿಕ್ಷಣ ಪ್ರವೇಶಕ್ಕೆ ಪರಿಶಿಷ್ಟವರ್ಗಗಳೂ ಸೇರಿದಂತೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಆದೇಶ ಹೊರಡಿಸಿತು. ಕರ್ನಾಟಕ ಉಚ್ಚ ನ್ಯಾಯಾಲಯ ರಾಮಕೃಷ್ಣ ಸಿಂಗ್ ಪ್ರಕರಣದಲ್ಲಿ, ಈ ಎರಡೂ ಆದೇಶಗಳು ಕಮ್ಯುನಲ್ ಹಾಗೂ ವಿಧಿ15(4)ರ ಉಲ್ಲಂಘನೆ ಎಂದು ನಿರರ್ಥಕಗೊಳಿಸಿತು.

ಮತ್ತೆ ಕರ್ನಾಟಕ ಸರಕಾರ ಹಿಂದುಳಿದವರನ್ನು ಗುರುತಿಸಲು 1960 ರಲ್ಲಿ ಡಾ.ನಾಗನಗೌಡ ಸಮಿತಿ ನೇಮಿಸಿ ಆದೇಶ ಹೊರಡಿಸಿತು. ಸಮಿತಿ 3 ಮಾನದಂಡಗಳನ್ನು ಅನುಸರಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಿತು. ವರದಿ ಆಧರಿಸಿ ಶೇ.68ರಷ್ಟು ಮೀಸಲಾತಿ ನಿಗದಿ ಪಡಿಸಿ ಸರಕಾರ ಆದೇಶ ಹೊರಡಿಸಿತು. ಆದರೆ ಹಿಂದುಳಿದ ವರ್ಗಗಳನ್ನು ಗುರುತಿಸಲು 'ಜಾತಿ'ಯನ್ನಷ್ಟೇ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಎದುರಾಯಿತು. ಆಗ ಸರ್ವೋಚ್ಚ ನ್ಯಾಯಾಲಯವು, ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ಜಾತಿ ಪ್ರಸ್ತುತ ಎನಿಸಿದರೂ, ಅದನ್ನೇ ಆಧರಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದೂ, ಜಾತಿಗೆ ಹೊರತಾದ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳ್ಳುವುದು ಅವಶ್ಯಕ ಎಂದೂ ತೀರ್ಪು ನೀಡಿತು( ಬಾಲಾಜಿ vs ಮೈಸೂರು). ತೀರ್ಪಿನಲ್ಲಿ "...The group of citizens to whom Article15(4) applies are described as ' classes of citizens', not as castes of citizens.." ಎಂದು ವಿಶದ ಪಡಿಸಿದೆ.

'ವರ್ಗ' ಮತ್ತು 'ಜಾತಿ'ಗಳೆರಡೂ ಅಂತರ್ಗತ ವ್ಯತ್ಯಾಸ ಹೊಂದಿವೆ ಎಂಬ ಅಂಶವನ್ನು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ. ಜಾತಿಯೇ ಮಾನದಂಡವಲ್ಲ ಎಂಬ ಅಂಶವನ್ನು ಆಂಧ್ರಪ್ರದೇಶ vs ಪಿ.ಸಾಗರ್, ಡಿ.ಜಿ.ವಿಶ್ವನಾಥ್ vs ಮೈಸೂರು ಮತ್ತು ಚಿತ್ರಲೇಖ vs ಮೈಸೂರು ಪ್ರಕರಣಗಳಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಮತ್ತೆ ದೃಢೀಕರಿಸಿತು. ಅಂತಿಮವಾಗಿ 1992ರಲ್ಲಿ ಮಂಡಲ್ ಪ್ರಕರಣದಲ್ಲಿ(ಇಂದ್ರಾ ಸಹಾನಿ vs ಭಾರತ ಸರಕಾರ) ಸರ್ವೋಚ್ಚ ನ್ಯಾಯಾಲಯದಿಂದ ಈ ವಿಷಯ ತಾರ್ಕಿಕವಾಗಿ ಅಂತ್ಯ ಕಂಡುಕೊಂಡು, ಆವರೆಗೆ ಇದ್ದ ಎಲ್ಲ ವಿವಾದಿತ ಅಂಶಗಳಿಗೆ ತೆರೆ ಬಿದ್ದಿತು.

ಜಾತಿ, ಸಾಮಾಜಿಕ ಮತ್ತು ವೃತ್ತಿಗತ ಏಕರೂಪದ (homogenious) ವರ್ಗ ಎಂದೂ ನ್ಯಾಯಾಲಯ ಸ್ಪಷ್ಟ ಪಡಿಸಿದೆ. ಹಿಂದೂಯೇತರರಲ್ಲಿ ಹಲವು ವೃತ್ತಿ ಆಧಾರಿತ ಸಮೂಹಗಳಿವೆ ಹಾಗೂ ಚಾರಿತ್ರಿಕ ಕಾರಣದಿಂದ ಅವುಗಳು ಸಾಮಾಜಿಕವಾಗಿ ಹಿಂದುಳಿದವು ಎಂದು ಪರಿಗಣಿತವಾಗಿವೆ. ತಲೆಮಾರುಗಳಲ್ಲಿ ವೃತ್ತಿ ಬಿಟ್ಟು ಕೊಟ್ಟರೂ ಬೆನ್ನಿಗಂಟಿದ ವೃತ್ತಿ ಕಳಂಕ ಕಳಚಿಕೊಳ್ಳುವುದಿಲ್ಲ. ಜಾತಿಯಂತೆಯೇ, ಕೋಮು (ಮುಸ್ಲಿಂ, ಕ್ರಿಶ್ಚಿಯನ್, ಜೈನ..) ಸಮೂಹ ಮತ್ತು ಪಂಗಡಗಳೂ ಸಹ ಹಿಂದುಳಿದ ವರ್ಗಗಳೆಂದು ಪರಿಗಣಿಸಲ್ಪಡುತ್ತವೆ ಎಂದು ನ್ಯಾಯಾಲಯಗಳ ತೀರ್ಪುಗಳಲ್ಲಿ ಧ್ವನಿಸಿದೆ.

ಜಾತಿ ಮತ್ತು ಕಸುಬಿನ ಬಗ್ಗೆ ಮಾನವ ಕುಲಶಾಸ್ತ್ರಜ್ಞ ಸರ್ ಹರ್ಬರ್ಟ್ ಹೋಪ್ ರಿಸ್ಲೇ ''ಜಾತಿಯು, ಒಂದು ನಿರ್ದಿಷ್ಟವಾದ ಕಸುಬು ಮತ್ತು ಒಂದು ಸಾಮಾನ್ಯ ಹೆಸರನ್ನು ಹೊಂದಿರುವ ಕುಟುಂಬಗಳು ಅಥವಾ ಕುಟುಂಬಗಳ ಗುಂಪನ್ನು ಒಳಗೊಂಡಿರುವ ಸಮೂಹ...'' ಎಂದು ಹೇಳಿದ್ದಾರೆ. ಹೀಗಾಗಿ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಕಸುಬು ಮತ್ತು ಜಾತಿಗಳು ಅವಿನಾಭಾವ ಸಂಬಂಧ ಹೊಂದಿವೆ.

ಕುಲೀನ ಕಸುಬುದಾರರು ಹೆಮ್ಮೆಯಿಂದ ಜಾತಿ ಹೇಳಿಕೊಂಡರೆ, ಕೆಳಸ್ತರದ ಕಸುಬುದಾರರು ಜಾತಿ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳುತ್ತಾರೆ. ಪೌರೋಹಿತ್ಯ ಮತ್ತು ಮಲಿನ ಉಡುಪುಗಳನ್ನು ಮಡಿ ಮಾಡುವವರ ಕಸುಬುಗಳ ನಡುವಿನ ಅಂತರ ಗಮನಿಸಿದರೆ ಸಾಕು, ಶ್ರೇಷ್ಠ ಮತ್ತು ಕನಿಷ್ಠಗಳ ನಡುವೆ ಇರುವ ಭಿನ್ನತೆ ಮೇಲುನೋಟಕ್ಕೇ ಗೋಚರವಾಗುತ್ತದೆ. ಮಡಿಯಿಂದ 'ಮಡಿವಾಳ', ಚರ್ಮದ ಮೆಟ್ಟುಗಳನ್ನು ಅಣಿಗೊಳಿಸಿ 'ಚಮ್ಮಾರ', ಹತ್ತಿಯನ್ನು ಹಿಂಜಿ 'ಪಿಂಜಾರ', ಮನೆ ಮನೆ ಭಿಕ್ಷೆ ಬೇಡಿ 'ದರವೇಶಿ', ಉಪ್ಪುಮಾಡಿ 'ಉಪ್ಪಾರ', ಬುಡುಬಡಿಕೆ ನುಡಿಸಿ 'ಬುಡುಬುಡಿಕೆ'ಯವನಾಗಿ, ಕುಲುಮೆಯಲ್ಲಿ ಕೈ-ಮೈ ಕಾಯಿಸಿಕೊಂಡು 'ಕಮ್ಮಾರ'ನೆನಿಸಿಕೊಂಡಂತೆ, ವ್ಯಕ್ತಿಗತ ಕಸುಬುಗಳೇ 'ಜಾತಿ'ಗಳೆಂದು (ಜಾತಿ-ಸಂಸ್ಕೃತ ಪದ) ನಾಮಾಂಕಿತಗೊಂಡಿವೆ. ಕಸುಬು ನಿರ್ವಹಿಸುತ್ತಿದ್ದ ಗುಂಪು ಅಥವಾ ಸಮೂಹ ಅಥವಾ ಸಮುದಾಯ ಒಂದು ನಿರ್ದಿಷ್ಟ ಪದ ಬಳಕೆಗೆ ಕಾರಣವಾಗಿ, ಅದು(ಜಾತಿ) ಸಂಕುಚಿತಾರ್ಥ ಪಡೆದುಕೊಂಡಿದೆ! ಹೀಗಾಗಿ ಕಸುಬು ಮುನ್ನೆಲೆಗೆ ಬಂದು, ಜಾತಿ ಸಾಂಕೇತಿಕವೆನಿಸಿದೆ. ಕಸುಬು ಮತ್ತು ಕಸುಬುದಾರನ ಬವಣೆ-ಬದುಕುಗಳೇ ಮುನ್ನೆಲೆಗೆ ಬಂದು ಸಾಮಾಜಿಕ ಅವಸ್ಥೆಗೆ ಕಾರಣವಾಗಿ, ಕಸುಬುದಾರನ ಹಿಂದುಳಿದಿರುವಿಕೆ ಪ್ರಾಮುಖ್ಯತೆ ಪಡೆದುಕೊಂಡು, ಜಾತಿ ಹಿಂದೆ ಸರಿದು ಅಪ್ರಮುಖವೆನಿಸಿದೆ.

ಜಾತಿಯನ್ನು ಆಧರಿಸಿಯೇ ಮೀಸಲಾತಿ ನೀಡಲಾಗುತ್ತಿದೆ ಎಂದು ಭ್ರಮೆಗೆ ಬಿದ್ದ, ಜಾತಿ ಮತ್ತು ಜಾತೀಯತೆಯನ್ನು ಆಂತರ್ಯದಲ್ಲಿ ಆರಾಧಿಸುವ ಕುಲೀನ ಜಾತಸ್ಥರು ಮೀಸಲಾತಿಯನ್ನು ವಿರೋಧಿಸಿಕೊಂಡೇ ಬಂದವರು. 1992ರಲ್ಲಿ ಮಂಡಲ್ ವರದಿ ಜಾರಿ ವಿರೋಧಿಸಿ, ಮಂಡಲ್‌ಗೆ ಎದುರಾಗಿ ಕಮಂಡಲ ಮುಂದಿರಿಸಿ ಬೊಬ್ಬಿರಿದುದು ಐತಿಹಾಸಿಕ ಸಾಕ್ಷಿಯಾಗುಳಿದಿದೆ. ಆದರೆ, ಕಾಲ ಬದಲಾಗಿ ಮೀಸಲಾತಿ ವಿರೋಧಿಸಿದ ಜನರೇ ಇಂದು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಅದಕ್ಕೆ ಕಾರಣ 2019ರಲ್ಲಿ ಸಂವಿಧಾನದ ವಿಧಿಗಳಿಗೆ ತಿದ್ದುಪಡಿ ಮಾಡಿ ಕುಲೀನ ಕಸುಬುದಾರರಲ್ಲಿ, ಆರ್ಥಿಕ ದುರ್ಬಲರಿಗೆ (EWS) ಶೇ.10ರಷ್ಟು ಮೀಸಲಾತಿ ನೀಡಿ ಕೇಂದ್ರ ಸರಕಾರ ಹೊರಡಿಸಿದ ಆದೇಶ. ತಮಗೆ ಒಳಿತಾದ ಈ ಆದೇಶವನ್ನು ಕುಯ್ಗುಡದೆ, ಎಲ್ಲ ಇಂದ್ರಿಯಗಳನ್ನು ಮುಚ್ಚಿ ಆಸ್ವಾದಿಸುತ್ತಿರುವ ಪರಿಯನ್ನು ಆಷಾಢಭೂತಿಯನ್ನದೆ ಮತ್ತೇನನ್ನಬೇಕು?

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top