ಹೊಸದಿಲ್ಲಿ, ಮೇ 21: ಬಾಲಿವುಡ್ನ ಹಿರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷಣ್ ಶನಿವಾರ ನಾಗಪುರದಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
78 ವರ್ಷದ ರಾಮ್ ಲಕ್ಷಣ್ ಹಿಂದಿಯ ಸೂಪರ್ಹಿಟ್ ಸಿನೆಮಗಳಾದ ಹಮ್ ಆಪ್ಕೆ ಹೈಂ ಕೋನ್, ಮೈನೆ ಪ್ಯಾರ್ ಕಿಯಾ, ಹಮ್ ಸಾತ್ ಸಾತ್ ಹೈ, ತರಾನಾ, ಪತ್ಥರ್ ಕೀ ಫೂಲ್ ಸಹಿತ ಹಲವು ಸಿನೆಮಗಳಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು. ವಿಜಯ್ ಪಾಟೀಲ್ ಅವರ ನಿಜನಾಮಧೇಯವಾಗಿದೆ. 6 ದಿನದ ಹಿಂದೆ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಪಡೆದಿದ್ದರು. ಆಗ ಯಾವುದೇ ಸಮಸ್ಯೆ ಇರದಿದ್ದರೂ ಮನೆಗೆ ಬಂದ ಬಳಿಕ ನಿಶ್ಯಕ್ತಿ ಕಾಡಿತ್ತು. ಅವರ ಆಮ್ಲಜನಕದ ಪ್ರಮಾಣ ಕುಸಿಯತೊಡಗಿತು. ವೈದ್ಯರು ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು. ಆದರೆ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಅವರ ಪುತ್ರ ಅಮರ್ ಪಾಟೀಲ್ ಹೇಳಿದ್ದಾರೆ.
ಸುಮಾರು 150ಕ್ಕೂ ಅಧಿಕ ಮರಾಠಿ, ಭೋಜ್ಪುರಿ ಮತ್ತು ಹಿಂದಿ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಾಮ್ ಲಕ್ಷಣ್ ಸುಮಾರು 4 ದಶಕಗಳ ಕಾಲ ಸಂಗೀತ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ್ದರು. ರಾಮ್ ಲಕ್ಷಣ್ ಅವರ ಸಂಗೀತ ನಿರ್ದೇಶನದ ಹಲವು ಗೀತೆಗಳಿಗೆ ಧ್ವನಿಯಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
