Friday, 23 Apr, 12.17 am ವಾರ್ತಾಭಾರತಿ

ಅಂತರಾಷ್ಟ್ರೀಯ
ಇಂಡೋನೇಶ್ಯದ ನಾಪತ್ತೆಯಾಗಿರುವ ಸಬ್‌ಮರೀನ್‌ಗಾಗಿ ಶೋಧ ಮುಂದುವರಿಕೆ

ಜಕಾರ್ತ (ಇಂಡೋನೇಶ್ಯ), ಎ. 22: ಇಂಡೋನೇಶ್ಯದ ಬಾಲಿ ದ್ವೀಪದ ಸಮುದ್ರದಲ್ಲಿ ಬುಧವಾರ ನಾಪತ್ತೆಯಾಗಿರುವ ಸಬ್‌ಮರೀನ್‌ಗಾಗಿ ಶೋಧ ಕಾರ್ಯಾಚರಣೆಯನ್ನು ನೌಕಾಪಡೆ ಗುರುವಾರ ತೀವ್ರಗೊಳಿಸಿದೆ.

53 ನಾವಿಕರನ್ನು ಹೊತ್ತಿರುವ ಸಬ್‌ಮರೀನ್ ನಿಗದಿಗಿಂತಲೂ ಹೆಚ್ಚಿನ ಆಳಕ್ಕೆ ಕುಸಿದಿರಬೇಕೆಂದು ಭಾವಿಸಲಾಗಿದೆ. ಹಾಗಾಗಿ, ಅದನ್ನು ಹೊರತೆಗೆಯುವ ಸಾಧ್ಯತೆಗಳು ಕ್ಷೀಣವಾಗಿವೆ ಎನ್ನಲಾಗಿದೆ. ಸಬ್‌ಮರೀನ್‌ನಲ್ಲಿರುವ ಆಮ್ಲಜನಕವು ಶನಿವಾರ ಬೆಳಗ್ಗಿನವರೆಗೆ ಮಾತ್ರ ಸಾಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಡೀಸೆಲ್ ಚಾಲಿತ 'ಕೆಆರ್‌ಐ ನಂಗಾಲ 402' ಸಬ್‌ಮರೀನ್ ಬುಧವಾರ ತರಬೇತಿಯಲ್ಲಿ ತೊಡಗಿದ್ದಾಗ ನಾಪತ್ತೆಯಾಗಿತ್ತು. ಅದು ಬಾಲಿ ದ್ವೀಪದಿಂದ ಉತ್ತರಕ್ಕೆ ಸುಮಾರು 90 ಕಿ.ಮೀ. ದೂರದಲ್ಲಿ ಕೊನೆಯ ಬಾರಿಗೆ ಮುಳುಗಿತ್ತು ಎನ್ನಲಾಗಿದೆ.

''ಶನಿವಾರ ಮುಂಜಾನೆ 3 ಗಂಟೆಗೆ ಆಮ್ಲಜನಕ ಮುಗಿಯುವ ಮುನ್ನವೇ ನಾವಿಕರನ್ನು ರಕ್ಷಿಸುವ ಭರವಸೆ ನಮಗಿದೆ'' ಎಂದು ಇಂಡೋನೇಶ್ಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಯುಡೊ ಮರ್ಗೋನೊ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸಬ್‌ಮರೀನ್ 2,000ದಿಂದ 2,300 ಅಡಿ ಆಳಕ್ಕೆ ಮುಳುಗಿರಬಹುದು ಎಂದು ನೌಕಾಪಡೆ ಭಾವಿಸಿದೆ. ಇದು ಅದರ ಸಾಮರ್ಥ್ಯವಾದ 656 ಅಡಿಗಿಂತ ತುಂಬಾ ಹೆಚ್ಚು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top