Dailyhunt
IPL 2026 | ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್‌ಗಳ ಜಯ

IPL 2026 | ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್‌ಗಳ ಜಯ

ಹೊಸದಿಲ್ಲಿ, ಎ.4: ಇಂಪ್ಯಾಕ್ಟ್ ಪ್ಲೇಯರ್ ಆಗಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಮೀರ್ ರಿಝ್ವಿ(90 ರನ್, 51 ಎಸೆತ, 7 ಬೌಂಡರಿ, 7 ಸಿಕ್ಸರ್)ಸಾಹಸದಿಮದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್‌ನ ಎಂಟನೇ ಪಂದ್ಯದಲ್ಲಿ ಗೆಲ್ಲಲು 163 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 18.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿದೆ.

ಆರಂಭಿಕ ಆಟಗಾರ ಕೆ.ಎಲ್.ರಾಹುಲ್(1)ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವಿಫಲರಾದರು. ನಿತೀಶ್ ರಾಣಾ ಸೊನ್ನೆ ಸುತ್ತಿದರು. ಆಗ ಪಥುಮ್ ನಿಸ್ಸಾಂಕ(44 ರನ್, 30 ಎಸೆತ, 6 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಕೈಜೋಡಿಸಿದ ಸಮೀರ್ ಮೂರನೇ ವಿಕೆಟ್‌ಗೆ 49 ಎಸೆತಗಳಲ್ಲಿ 66 ರನ್ ಸೇರಿಸಿ ಇನಿಂಗ್ಸ್ ರಿಪೇರಿ ಮಾಡಿದರು.

ನಿಸ್ಸಾಂಕ ಔಟಾದ ನಂತರ ಡೇವಿಡ್ ಮಿಲ್ಲರ್(ಔಟಾಗದೆ 21, 18 ಎಸೆತ, 4 ಬೌಂಡರಿ) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 39 ಎಸೆತಗಳಲ್ಲಿ 78 ರನ್ ಜೊತೆಯಾಟದಲ್ಲಿ ಭಾಗಿಯಾದ ಸಮೀರ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಡೆಲ್ಲಿ ತಂಡ ಗೆಲುವು ದಾಖಲಿಸಲು ನೆರವಾದರು. ಅರ್ಹವಾಗಿಯೇ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.

ಮುಂಬೈ ಇಂಡಿಯನ್ಸ್: 162/6: ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡವು ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಅರ್ಧಶತಕದ(51 ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್)ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿದೆ.

ಆರಂಭಿಕ ಬ್ಯಾಟರ್ ರಿಕೆಲ್ಟನ್(9 ರನ್)ಹಾಗೂ ಮೂರನೇ ಕ್ರಮಾಂಕದ ಆಟಗಾರ ತಿಲಕ್ ವರ್ಮಾ(0)ಮುಕೇಶ್ ಕುಮಾರ್ ಎಸೆದ ಮೂರನೇ ಓವರ್‌ನಲ್ಲಿ ಬೆನ್ನುಬೆನ್ನಿಗೆ ಔಟಾದರು. ಮಾಜಿ ನಾಯಕ ರೋಹಿತ್ ಶರ್ಮಾ(35 ರನ್, 26 ಎಸೆತ, 5 ಬೌಂಡರಿ, 1 ಸಿಕ್ಸರ್)ಹಾಗೂ ಸೂರ್ಯಕುಮಾರ್ ಮೂರನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ರೋಹಿತ್ ಹಾಗೂ ರುದರ್‌ಫೋರ್ಡ್(5 ರನ್)ಒಬ್ಬರ ಹಿಂದೆ ಒಬ್ಬರು ಔಟಾದರು. ಸೂರ್ಯಕುಮಾರ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬೆನ್ನಿಗೆ ವಿಕೆಟ್ ಒಪ್ಪಿಸಿದರು.

ನಮನ್ ಧೀರ್(28 ರನ್, 21 ಎಸೆತ), ಮಿಚೆಲ್ ಸ್ಯಾಂಟ್ನರ್(ಔಟಾಗದೆ 18, 13 ಎಸೆತ)ಹಾಗೂ ಕಾರ್ಬಿನ್ ಬಾಷ್(ಔಟಾಗದೆ 11, 4 ಎಸೆತ)ಎರಡಂಕೆಯ ಸ್ಕೋರ್ ಗಳಿಸಿ ಮುಂಬೈ ತಂಡ ಗೌರವಾರ್ಹಮೊತ್ತ ಗಳಿಸುವಲ್ಲಿ ನೆರವಾದರು.

ಡೆಲ್ಲಿ ತಂಡದ ಪರ ವೇಗದ ಬೌಲರ್ ಮುಕೇಶ್ ಕುಮಾರ್(2-26)ಯಶಸ್ವಿ ಪ್ರದರ್ಶನ ನೀಡಿದರು. ಅಕ್ಷರ್ ಪಟೇಲ್(1-22), ನಟರಾಜನ್(1-24), ವಿಪ್ರಜ್ ನಿಗಮ್(1-24)ಹಾಗೂ ಲುಂಗಿ ಗಿಡಿ(1-34)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi