Dailyhunt
IPL- 2026| ರಾಜಸ್ಥಾನ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಿಗೆ ಬೌಲರ್‌ಗಳು ಕಾರಣ: ಹಾರ್ದಿಕ್ ಪಾಂಡ್ಯ

IPL- 2026| ರಾಜಸ್ಥಾನ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಿಗೆ ಬೌಲರ್‌ಗಳು ಕಾರಣ: ಹಾರ್ದಿಕ್ ಪಾಂಡ್ಯ

ಗುವಾಹಟಿ, ಎ. 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತಿರುವುದಕ್ಕೆ ಬೌಲರ್‌ಗಳು ಕಾರಣ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ತಂಡದ ಬೌಲರ್‌ಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು 27 ರನ್‌ಗಳಿಂದ ಸೋತ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅಮೋಘ ಫಾರ್ಮ್‌ನಲ್ಲಿದ್ದು, ಮುಂಬೈ ಬೌಲರ್‌ಗಳನ್ನು ಚಿಂದಿ ಉಡಾಯಿಸಿದ್ದಾರೆ. ತಲಾ 11 ಓವರ್‌ಗಳ ಇನಿಂಗ್ಸ್‌ನ ಪಂದ್ಯದಲ್ಲಿ ಜೈಸ್ವಾಲ್ 32 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್‌ಗಳನ್ನು ಸಿಡಿಸಿದರು.

ರಾಜಸ್ಥಾನ ರಾಯಲ್ಸ್ 11 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು.

ಗೆಲ್ಲಲು ಹನ್ನೊಂದು ಓವರ್‌ಗಳಲ್ಲಿ 151 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದ ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್‌ಗಳ ನಷ್ಟಕ್ಕೆ 123 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಮುಂಬೈ ಇಂಡಿಯನ್ಸ್ ಆರಂಭಿಕರಾದ ರಯಾನ್ ರಿಕಲ್ಟನ್ (8) ಮತ್ತು ರೋಹಿತ್ ಶರ್ಮಾ (5) ರನ್‌ಗಳನ್ನು ಕೂಡಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ ಕೇವಲ 6 ರನ್‌ಗಳ ದೇಣಿಗೆ ನೀಡಿದರು.

ತಿಲಕ್ ವರ್ಮಾ 14 ಮತ್ತು ನಾಯಕ ಹಾರ್ದಿಕ್ ಪಾಂಡ್ಯ 9 ರನ್‌ಗಳನ್ನು ಗಳಿಸಿದರು.

ತಂಡಕ್ಕೆ ಆಧಾರವನ್ನು ಒದಗಿಸಿದ್ದು ನಮನ್ ಧೀರ್ (13 ಎಸೆತಗಳಲ್ಲಿ 25 ರನ್) ಮತ್ತು ಶರ್ಫೇನ್ ರುದರ್‌ಫೋರ್ಡ್ (8 ಎಸೆತಗಳಲ್ಲಿ 25 ರನ್). ಉಳಿದ ಬ್ಯಾಟರ್‌ಗಳು ವಿಫಲವಾದರು.

ರಾಜಸ್ಥಾನ ರಾಯಲ್ಸ್ ಪರವಾಗಿ ನ್ಯಾಂಡ್ರಿ ಬರ್ಗರ್, ಸಂದೀಪ್ ಶರ್ಮಾ ಮತ್ತು ರವಿ ಬಿಷ್ಣೋಯ್ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಯಶಸ್ವಿ ಜೈಸ್ವಾಲ್‌ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ಇದು ಮುಂಬೈ ಇಂಡಿಯನ್ಸ್‌ನ ಸತತ ಎರಡನೇ ಸೋಲಾಗಿದೆ.

ಈ ಪಂದ್ಯದಲ್ಲಿ ಬ್ಯಾಟರ್‌ಗಳ ತಪ್ಪಿಲ್ಲ ಎಂದು ಹೇಳಿದ ಹಾರ್ದಿಕ್ ಪಾಂಡ್ಯ, ಬೌಲರ್‌ಗಳು ತಮ್ಮ ಯೋಜನೆಗಳನ್ನು ಜಾರಿಗೊಳಿಸಲು ವಿಫಲರಾದರು ಎಂದು ದೂರಿದರು.

ಮುಂಬೈ ಇಂಡಿಯನ್ಸ್ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್, ಶಾರ್ದುಲ್ ಠಾಕೂರ್ ಮತ್ತು ದೀಪಕ್ ಚಾಹರ್ ದುಬಾರಿಯಾದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi