ಚೆನ್ನೈ, ಎ.3: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ (50 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ನೆರವಿನಿಂದ ಶುಕ್ರವಾರ ನಡೆದ ಏಳನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಐದು ವಿಕೆಟ್ ಗಳ ಅಂತರದಿಂದ ಮಣಿಸಿತು.
ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ CSK ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಆಯುಷ್ ಮ್ಹಾತ್ರೆ ಅವರ ಆಕರ್ಷಕ ಅರ್ಧಶತಕದ (73 ರನ್, 43 ಎಸೆತ, 6 ಬೌಂಡರಿ, 5 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.
ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಸತತ ಎರಡನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.
ಪಂಜಾಬ್ ಇನಿಂಗ್ಸ್ ಆರಂಭಿಸಿದ ಪ್ರಭ್‌ಸಿಮ್ರಾನ್ ಸಿಂಗ್ (43 ರನ್, 34 ಎಸೆತ) ಹಾಗೂ ಪ್ರಿಯಾಂಶ್ ಆರ್ಯ (39 ರನ್, 11 ಎಸೆತ) ಕೇವಲ 26 ಎಸೆತಗಳಲ್ಲಿ 61 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು.
ಮ್ಯಾಟ್ ಹೆನ್ರಿ ಈ ಜೋಡಿಯನ್ನು ಬೇರ್ಪಡಿಸಿದರು. ಪ್ರಭ್‌ಸಿಮ್ರಾನ್ 43 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೂಪರ್ 36 ರನ್ ಗೆ ವಿಕೆಟ್ ಒಪ್ಪಿಸಿದರು. ಆಗ ಪಂಜಾಬ್ 127 ರನ್ ಗೆ ಮೂರನೇ ವಿಕೆಟ್ ಕಳೆದುಕೊಂಡಿತು.
ನಾಲ್ಕನೇ ವಿಕೆಟ್ ಗೆ 32 ಎಸೆತಗಳಲ್ಲಿ 59 ರನ್ ಸೇರಿಸಿದ ಶ್ರೇಯಸ್ ಮತ್ತು ವಧೇರ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶ್ರೇಯಸ್ ಅರ್ಧಶತಕ ಗಳಿಸಿದ ಬೆನ್ನಲ್ಲೇ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು.
ಶಶಾಂಕ್ ಸಿಂಗ್ (ಔಟಾಗದೆ 14) ಹಾಗೂ ಮಾರ್ಕಸ್ ಸ್ಟೋಯಿನಿಸ್ (ಔಟಾಗದೆ 9) ಪಂಜಾಬ್ ಗೆ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
CSK ಪರವಾಗಿ ಮ್ಯಾಟ್ ಹೆನ್ರಿ (2-54) ಹಾಗೂ ಅನ್ಶುಲ್ ಕಾಂಬೋಜ್ (2-35) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು CSK ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇವಲ 7 ರನ್ ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವಿಫಲರಾದರು. ಆಗ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ (28 ರನ್, 22 ಎಸೆತ) ಎರಡನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಋತುರಾಜ್, ಆಯುಷ್ ಹಾಗೂ ಕಾರ್ತಿಕ್ ಶರ್ಮಾ (1 ರನ್) ಔಟಾದಾಗ CSK 130 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.
ಸರ್ಫರಾಝ್ ಖಾನ್ (32 ರನ್, 12 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶಿವಂ ದುಬೆ (ಔಟಾಗದೆ 45, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಐದನೇ ವಿಕೆಟ್‌ಗೆ 38 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು.
► ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ ಗಳಲ್ಲಿ 209/5
(ಆಯುಷ್ ಮ್ಹಾತ್ರೆ 73, ಶಿವಂ ದುಬೆ ಔಟಾಗದೆ 45, ಸರ್ಫರಾಝ್ ಖಾನ್ 32, ಋತುರಾಜ್ ಗಾಯಕ್ವಾಡ್ 28, ವಿ. ವೈಶಾಕ್ 2-38)
ಪಂಜಾಬ್ ಕಿಂಗ್ಸ್: 18.4 ಓವರ್ ಗಳಲ್ಲಿ 210/5
(ಶ್ರೇಯಸ್ ಅಯ್ಯರ್ 50, ಪ್ರಭ್‌ಸಿಮ್ರಾನ್ ಸಿಂಗ್ 43, ಪ್ರಿಯಾಂಶ್ ಆರ್ಯ 39, ಕೂಪರ್ 36, ಅನ್ಶುಲ್ ಕಾಂಬೋಜ್ 2-43, ಮ್ಯಾಟ್ ಹೆನ್ರಿ 2-54)

