ಚೆನ್ನೈ: ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪಕ್ಕಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ IPL ಆಡಳಿತ ಮಂಡಳಿ 24 ಲಕ್ಷ ರೂ. ದಂಡ ವಿಧಿಸಿದೆ.
ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಶ್ರೇಯಸ್ ಅಯ್ಯರ್ ಗೆ ದಂಡ ವಿಧಿಸಲಾಗಿತ್ತು.
ಅದೇ ತಪ್ಪನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧವೂ ಅವರು ಪುನರಾವರ್ತಿಸಿದರು. ಹೀಗಾಗಿ, ಐಪಿಎಲ್ ಆಡಳಿತ ಮಂಡಳಿಯು ಪಂಜಾಬ್ ನಾಯಕನಿಗೆ ಭಾರಿ ದಂಡ ವಿಧಿಸಿದೆ. ಅಷ್ಟೇ ಅಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪಂಜಾಬ್ ಕಿಂಗ್ಸ್ ತಂಡದ ಎಲ್ಲ ಆಟಗಾರರಿಗೂ ಸಂಘಟಕರು ದಂಡ ವಿಧಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಐಪಿಎಲ್ ಆಡಳಿತ ಮಂಡಳಿ, "ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನ ಸೂಪರ್ ಕಿಂಗ್ಸ್ ವಿರುದ್ಧದ 2026ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೀಡಾಕೂಟದ 7ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ತಂಡ ನಿಧಾನ ಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ" ಎಂದು ಹೇಳಿದೆ.
"ಐಪಿಎಲ್ ನೀತಿ ಸಂಹಿತೆಯ ವಿಧಿ 2.22ರ ಅನ್ವಯ, ಕನಿಷ್ಠ ಓವರ್ ದರ ಅಪರಾಧಗಳಿಗೆ ಸಂಬಂಧಿಸಿದಂತೆ, ಇದು ಅವರ ತಂಡದ ಎರಡನೇ ಅಪರಾಧವಾಗಿರುವುದರಿಂದ, ಅಯ್ಯರ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಉಳಿದ ಆಟಗಾರರಿಗೆ ತಲಾ ಆರು ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ವಿಧಿಸಲಾಗುತ್ತದೆ" ಎಂದು ಈ ಪ್ರಕಟನೆಯಲ್ಲಿ ತಿಳಿಸಲಾಗಿದೆ.

