ಹೊಸದಿಲ್ಲಿ, ಎ.4: ಟಾಸ್ ಚಿಮ್ಮಲು ಕೆಲವೇ ಕ್ಷಣಗಳು ಇರುವಾಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪ್ರಸಾರಕರು ಘೋಷಿಸಿದರು. ಆಗ ಸೂರ್ಯಕುಮಾರ್ ಯಾದವ್ ನಗುತ್ತಾ, ಮುಂಬೈನ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿದರು.
ರವಿ ಶಾಸ್ತ್ರಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅವರ ಕೈಕುಲುಕಿದರು.
ಟಿ-20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್‌ರನ್ನು ನೋಡಿದ ದಿಲ್ಲಿಯ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು.
ಸೂರ್ಯಕುಮಾರ್ ಮುಂಬೈ ತಂಡವನ್ನು ಮುನ್ನಡೆಸಿದ್ದೇಕೆ? ಹಾರ್ದಿಕ್ ಪಾಂಡ್ಯ ಇಂತಹ ಪ್ರಮುಖ ಪಂದ್ಯದಿಂದ ವಂಚಿತರಾಗಿದ್ದೇಕೆ? ಎಂಬ ದೊಡ್ಡ ಪ್ರಶ್ನೆ ಮೂಡಿತು.
ಟಾಸ್ ಗೆದ್ದ ಅಕ್ಷರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ತನ್ನ ತಂಡದ ಆಡುವ ಬಳಗದ ಬಗ್ಗೆ ಅವರು ಮಾತನಾಡಿದರು. ಆಗ ಎಲ್ಲರ ಗಮನ ಸೂರ್ಯರತ್ತ ಹರಿಯಿತು.
''ಹಾರ್ದಿಕ್ ಪಾಂಡ್ಯಗೆ ಸೌಖ್ಯವಿಲ್ಲ, ಅವರು ಇಂದಿನ ಪಂದ್ಯಕ್ಕೆ ಫಿಟ್ ಆಗಿರಲಿಲ್ಲ. ಹೀಗಾಗಿ ನಾನು ತಂಡದ ನಾಯಕತ್ವವಹಿಸಿದ್ದೇನೆ'' ಎಂದು ಸೂರ್ಯ ಕುಮಾರ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ 2026ರ ಐಪಿಎಲ್ ಅಭಿಯಾನವನ್ನು ಆರಂಭಿಸಿದೆ. ಮುಂಬೈ ತಂಡವು ಪಾಂಡ್ಯ ಬದಲಿಗೆ ದೀಪಕ್ ಚಹಾರ್‌ರನ್ನು ಸೇರಿಸಿಕೊಂಡಿದೆ.

