Dailyhunt Logo
  • Light mode
    Follow system
    Dark mode
    • Play Story
    • App Story
ಇ-ಪೌತಿ ಪ್ರಕರಣ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಿ : ಡಿಸಿಎಂ ಜಿ.ಪರಮೇಶ್ವರ್‌

ಇ-ಪೌತಿ ಪ್ರಕರಣ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಿ : ಡಿಸಿಎಂ ಜಿ.ಪರಮೇಶ್ವರ್‌

ಲಬುರಗಿ: ಕಲಬುರಗಿ ಕಂದಾಯ ವಿಭಾಗದಲ್ಲಿ ಬಾಕಿ ಉಳಿದಿರುವ 2,23,190 ಇ-ಪೌತಿ ಪ್ರಕರಣಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಟ್ಟು 3,57,024 ಇ-ಪೌತಿ ಪ್ರಕರಣಗಳಲ್ಲಿ ಇದುವರೆಗೆ 1,33,834 ಪ್ರಕರಣಗಳನ್ನು ಮಾತ್ರ ಇತ್ಯರ್ಥಗೊಳಿಸಲಾಗಿದೆ.

ವಿವಿಧ ಕಾರಣಗಳಿಂದ ಬಾಕಿ ಉಳಿದಿರುವ 2,23,190 ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ವಿಜಯನಗರ, ಕಲಬುರಗಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಅತಿ ಹೆಚ್ಚು ಇ-ಪೌತಿ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಒಟ್ಟು 17,576 ದರ್ಖಾಸ್ತು ಪ್ರಕರಣಗಳಲ್ಲಿ 10,775 ಪ್ರಕರಣಗಳಿಗೆ ಅನುಬಂಧ-1ಎ ಮಂಜೂರಾಗಿದ್ದು, ಈ ಪ್ರಕರಣಗಳಲ್ಲಿ ಕೂಡಲೇ ಪೋಡಿ ದುರಸ್ತಿ ಮಾಡಿ ಆರ್‌ಟಿಸಿ ನೀಡಬೇಕು. ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳಿರುವುದರಿಂದ ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದರು.

ಕಲಬುರಗಿ ವಿಭಾಗದಲ್ಲಿ 1,483 ಹೊಸ ಕಂದಾಯ ಗ್ರಾಮಗಳನ್ನು ರಚಿಸಬೇಕಿದ್ದು, ಇದುವರೆಗೆ 1,048 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 435 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಜನಗಣತಿ-2027 ಬಳಿಕ ಅಂತಿಮ ಅಧಿಸೂಚನೆ ಹೊರಡಿಸುವ ಕಾರ್ಯವನ್ನು ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಕಲಬುರಗಿ ವಿಭಾಗದಲ್ಲಿ ಪ್ರವರ್ಗ 'ಎ'ಗೆ ಸೇರಿದ 32 ಅಧಿಸೂಚಿತ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಬೇಕು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ನಾಲ್ಕು ದೇವಾಲಯಗಳ ಒಟ್ಟು 32.26 ಎಕರೆ ಒತ್ತುವರಿ ಜಮೀನನ್ನು ತೆರವುಗೊಳಿಸಿ ಇಲಾಖೆಯ ಸುಪರ್ದಿಗೆ ಪಡೆಯಬೇಕು. ಮುಂದಿನ ದಿನಗಳಲ್ಲಿ ದೇವಾಲಯಗಳ ಆಸ್ತಿಗಳ ಒತ್ತುವರಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿಭಾಗದಲ್ಲಿ ಒಟ್ಟು 7,606 ದೇವಾಲಯಗಳಿದ್ದು, ಇದುವರೆಗೆ 2,635 ದೇವಾಲಯಗಳ ಖಾತೆ ಮಾಡಲಾಗಿದೆ. ಬಾಕಿ ಉಳಿದಿರುವ 4,971 ದೇವಾಲಯಗಳ ಖಾತೆ ಪ್ರಕ್ರಿಯೆಯನ್ನು ಸಂಬಂಧಿತ ತಹಶೀಲ್ದಾರರು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi