ಬೆಂಗಳೂರು : ರಾಜ್ಯದ ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ) ಕಾರ್ಯಕ್ರಮ ಬಲಪಡಿಸಲು ಅಂತಾರಾಷ್ಟ್ರೀಯ ಒಡನಾಟ ಹಾಗೂ ಸಂಪರ್ಕ ಹೆಚ್ಚಿಸುವ ಅಗತ್ಯ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಇಲ್ಲಿನ ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿನಲ್ಲಿ (ಕೆಐಟಿಎಸ್) ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎ.17ರಂದು ಹೊಸದಿಲ್ಲಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕರ ಜತೆ ಸಮಾಲೋಚನೆ ಸಭೆ ನಡೆಯಲಿದೆ. ಅಲ್ಲಿ ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ಅನುಕೂಲತೆ ಕಲ್ಪಿಸುವುದು, ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಕೈಗೊಳ್ಳಬೇಕಾದ ರಚನಾತ್ಮಕ ಕಾರ್ಯಕ್ರಮಗಳ ಕುರಿತು ಉಲ್ಲೇಖಿಸಲಾಗುವುದು ಎಂದರು.
ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಯಭಾರಿಗಳು, ಹೈಕಮಿಷನರ್‍ಗಳು ಮತ್ತು ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.ಸಮಾನಾಂತರವಾಗಿ ಉದ್ಯಮಿಗಳ ಜೊತೆಗೆ ಸಭೆ, ಭಾಗಿದಾರರ ಜೊತೆ ಸಮಾಲೋಚನೆ ನಡೆಸುವುದಕ್ಕೂ ರಾಜ್ಯ ಸರಕಾರ ಉದ್ದೇಶಿಸಿದೆ. ನವೋದ್ಯಮಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಬಂಡವಾಳ ಹೂಡಿಕೆದಾರರನ್ನು ಒಟ್ಟುಗೂಡಿಸಿ ಜಾಗತಿಕ ಪಾಲುದಾರರ ಜೊತೆಗಿನ ಬಾಂಧವ್ಯ ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು.
ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಉಪಕ್ರಮಗಳ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ನವೋದ್ಯಮಗಳಿಗೆ ಅಗತ್ಯ ನೆರವು ನೀಡಲು ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯು ಕೆಲಸ ಮಾಡುತ್ತಿದೆ ಎಂದೂ ಅವರು ಉಲ್ಲೇಖಿಸಿದರು.
ಸಭೆಯಲ್ಲಿ ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಪ್ರಮುಖರಿದ್ದರು.

