Dailyhunt Logo
  • Light mode
    Follow system
    Dark mode
    • Play Story
    • App Story
ಜಾರ್ಖಂಡ್‌ ನಲ್ಲಿ ವಿದ್ಯಾರ್ಥಿಗಳ ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಯಾಕೆ? ಏನಿದು ವಿವಾದ?

ಜಾರ್ಖಂಡ್‌ ನಲ್ಲಿ ವಿದ್ಯಾರ್ಥಿಗಳ ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಯಾಕೆ? ಏನಿದು ವಿವಾದ?

ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಜಾರ್ಖಂಡ್‌ನ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಕಳೆದ ತಿಂಗಳಿನಿಂದ ಧರಣಿ ನಡೆಸುತ್ತಿದ್ದು, ಕೆಲವರು ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದಾರೆ. ದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಆರಂಭವಾದ ಈ ಹೋರಾಟವು ಜುಲೈ 29ರಿಂದ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

14ನೇ JPSC ನಾಗರಿಕ ಸೇವಾ ಪರೀಕ್ಷೆಯಲ್ಲಿ (JPSC Civil Services Exam) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ರಾಂಚಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಮತ್ತೂ ಐವರು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರಿಂದ ಹೋರಾಟ ತೀವ್ರಗೊಂಡಿದೆ.

CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿರುವುದರಿಂದ ರಾಂಚಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

►ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸುತ್ತಿರುವುದೇಕೆ?

ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ರಾಂಚಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಮೂಲಕ ಜೆಎಂಎಂ ನೇತೃತ್ವದ ಸರಕಾರವು ಪ್ರಕರಣವನ್ನು "ಮುಚ್ಚಿಹಾಕಲು" ಯತ್ನಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನೇಮಕಾತಿ ಹಗರಣದಲ್ಲಿ ಭಾರೀ ಪ್ರಮಾಣದ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಅವರು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಜಂಟಿ ತನಿಖೆಗೆ ಮೊದಲಿನಿಂದಲೂ ಒತ್ತಾಯಿಸುತ್ತಿದ್ದಾರೆ.

"ನಮಗೆ ನಡೆಯುತ್ತಿರುವ ಸಿಐಡಿ ತನಿಖೆಯ ಮೇಲೆ ಸಂಪೂರ್ಣ ನಂಬಿಕೆ ಹೊರಟುಹೋಗಿದೆ. ಈ ಹಿಂದೆ JSSC-CGLಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು. 150 ಪ್ರಶ್ನೆಗಳಲ್ಲಿ 135 ಪ್ರಶ್ನೆಗಳ ಉತ್ತರಗಳು ಸೋರಿಕೆಯಾಗಿದ್ದವು ಮತ್ತು 120 ಪ್ರಶ್ನೆಗಳು ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಪಕ್ಕಾ ಹೋಲಿಕೆಯಾಗಿದ್ದವು ಎಂಬುದನ್ನು ತನಿಖಾ ಸಂಸ್ಥೆಯೇ ಪತ್ತೆ ಮಾಡಿತ್ತು" ಎಂದು ಹಜಾರಿಬಾಗ್ ಜಿಲ್ಲೆಯ ಆಕಾಂಕ್ಷಿ ಹಾಗೂ ಪ್ರತಿಭಟನಾಕಾರ ವಿನಯ್ ಮೆಹ್ತಾ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಭ್ಯರ್ಥಿಗಳು ಇಮೇಲ್ ಮತ್ತು ವಾಟ್ಸಾಪ್ ಮೂಲಕ ಸೂಕ್ತ ದಾಖಲೆಗಳನ್ನು ಕಳುಹಿಸಿದ್ದರೂ, ಅಧಿಕಾರಿಗಳು ದೂರುಗಳನ್ನು ಸ್ವೀಕರಿಸಿಲ್ಲ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಅಕ್ರಮಗಳ ಆರೋಪದ ಮೇಲೆ ತನಿಖೆಗೆ ಒಳಪಟ್ಟಿರುವ 'ಟಿಡಿಪಿಎಲ್' ಎಂಬ ಖಾಸಗಿ ಸಂಸ್ಥೆ ನಡೆಸಿದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದೂ ಅವರು ಆಗ್ರಹಿಸುತ್ತಿದ್ದಾರೆ. JPSCಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಿರಂತರವಾಗಿ ನಡೆಯುತ್ತಿದ್ದು, ಈ ವರ್ಷ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳೂ ಸೋರಿಕೆಯಾಗಿವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಇದರ ಜೊತೆಗೆ, ಒಎಂಆರ್ ಶೀಟ್‌ಗಳಲ್ಲಿ "ಉತ್ತರಿಸಿಲ್ಲ" (not attempted) ಎಂಬ ಐದನೇ ಆಯ್ಕೆಯನ್ನು ಪರಿಚಯಿಸಬೇಕು ಎಂದೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ.

►ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ, ಪ್ರತಿಭಟನಾ ಮೆರವಣಿಗೆಗೆ ಯೋಜನೆ

ಜಾರ್ಖಂಡ್ ಕ್ರಾಂತಿಕಾರಿ ಲೋಕತಾಂತ್ರಿಕ ಮೋರ್ಚಾ (JKLM) ನಾಯಕ ದೇವೇಂದ್ರನಾಥ್ ಮಹತೋ ಈ ವಾರದ ಆರಂಭದಲ್ಲಿ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಮೊದಲು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯ ನಡುವೆ, ನಂತರ ಇತರ ಪ್ರತಿಭಟನಾಕಾರರೂ ಅವರೊಂದಿಗೆ ಸೇರಿಕೊಂಡರು.

ಉಪವಾಸ ಸತ್ಯಾಗ್ರಹ ಆರಂಭಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಹತೋ, ಅಕ್ರಮಗಳ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ "ನಿರ್ಲಕ್ಷ್ಯದ ಧೋರಣೆ" ವಿದ್ಯಾರ್ಥಿಗಳು, ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳ ಮನೋಬಲವನ್ನು ಕುಗ್ಗಿಸುತ್ತಿದೆ ಎಂದು ತಿಳಿಸಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲು ನಾನು ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇನೆ" ಎಂದು ಅವರು ಹೇಳಿದರು.

ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ತಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ವಿದ್ಯಾರ್ಥಿಗಳು 'ವಿಧಾನಸಭಾ ಚಲೋ' ಮೆರವಣಿಗೆಯನ್ನೂ ಘೋಷಿಸಿದ್ದಾರೆ.

JKLM ಸಂಸ್ಥೆಯು ಆಗಸ್ಟ್ 6ರಂದು ಮೆರವಣಿಗೆಯನ್ನು ಆಯೋಜಿಸಿದ್ದರೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಹಾಗೂ ಇತರ ಸಾರ್ವಜನಿಕ ಸಂಘಟನೆಗಳು ಆಗಸ್ಟ್ 7ರಂದು ಮೆರವಣಿಗೆ ನಡೆಸಲು ಯೋಜನೆ ರೂಪಿಸಿವೆ. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದ ಮತ್ತು ವಿದ್ಯಾರ್ಥಿ ಚಳವಳಿಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಬಯಸದ ಸಾಮಾನ್ಯ ವಿದ್ಯಾರ್ಥಿಗಳು ಆಗಸ್ಟ್ 10ರಂದು ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.

►ರಾಂಚಿ ಪ್ರತಿಭಟನೆಗೆ CJP ಬೆಂಬಲ

ದಿಲ್ಲಿಯ ಜಂತರ್ ಮಂತರ್‌ನಲ್ಲಿ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ CJP, ಈಗ ರಾಂಚಿ ಪ್ರತಿಭಟನೆಗೂ ಬೆಂಬಲ ಸೂಚಿಸಿದೆ. CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ರವಿವಾರ ರಾತ್ರಿ ವಿಡಿಯೊ ಕರೆ ಮೂಲಕ ವಿದ್ಯಾರ್ಥಿ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಲಾಗಿದೆ.

"JPSC ಮತ್ತು JSSC ನೇಮಕಾತಿ ಪರೀಕ್ಷೆಗಳ ಅಕ್ರಮಗಳ ವಿರುದ್ಧ ಜಾರ್ಖಂಡ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. CJP ಜಾರ್ಖಂಡ್‌ ನ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತದೆ ಹಾಗೂ ಅವರ ಬೇಡಿಕೆಗಳನ್ನು ಬೆಂಬಲಿಸುತ್ತದೆ" ಎಂದು ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಾಂಚಿ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ವಿವಿಧ ನಗರಗಳ ಜನರು ಆನ್‌ಲೈನ್ ಡೆಲಿವರಿ ಆಯಪ್‌ ಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಹಾರ ಪದಾರ್ಥಗಳನ್ನು ಕಳುಹಿಸುತ್ತಿದ್ದಾರೆ.

ವಿವಿಧ ರಾಜ್ಯ ಮಟ್ಟದ ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ರಾಜ್ಯ ಘಟಕವು ಆಲ್ಬರ್ಟ್ ಎಕ್ಕಾ ಚೌಕ್‌ನಲ್ಲಿ ಧರಣಿ ನಡೆಸಿತು.

►ಸರಕಾರದ ಪ್ರತಿಕ್ರಿಯೆ ಏನು?

ಜಾರ್ಖಂಡ್ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗದ ತನಿಖಾ ವರದಿಗಾಗಿ ಸರಕಾರ ಕಾಯುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ತಿಳಿಸಿದ್ದಾರೆ.

ಈ ಹೋರಾಟದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸೊರೇನ್, "ಸರಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನನ್ನ ಮನಸ್ಸಿನಲ್ಲಿ ಏನಿದೆ ಎಂದು ಬಿಚ್ಚಿಡಲು ಸಾಧ್ಯವಿಲ್ಲ. ಆದರೆ, ನಾನು ವಹಿಸಿಕೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಎಸ್‌ಐಟಿ ಹಗಲಿರುಳು ಶ್ರಮಿಸುತ್ತಿದೆ. ನಾವು ತನಿಖಾ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಕೈಸೇರಿದ ತಕ್ಷಣ ಸೂಕ್ತ ಕ್ರಮ ಕೈಗೊಂಡು, ತೆಗೆದುಕೊಳ್ಳುವ ನಿರ್ಧಾರಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದ ಜನತೆಗೆ ತಿಳಿಸುತ್ತೇವೆ" ಎಂದು ಹೇಳಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ನಿಯೋಗವೊಂದು ಮಾತುಕತೆ ನಡೆಸಲಿದೆಯೇ ಎಂಬ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವರ ಕಲ್ಯಾಣಕ್ಕಾಗಿ ಅಗತ್ಯವಿರುವ ಪ್ರತಿಯೊಂದು ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

"ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಸಾಧ್ಯವಾಗುವ ಪ್ರತಿಯೊಂದನ್ನೂ ಅವರಿಗಾಗಿ ಮಾಡಲಾಗುತ್ತದೆ" ಎಂದು ಹೇಳುವ ಮೂಲಕ ಸರಕಾರದ ಬೆಂಬಲದ ಭರವಸೆ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi