Dailyhunt Logo
  • Light mode
    Follow system
    Dark mode
    • Play Story
    • App Story
'ಜೈಲಿಗೆ ಹಾಕಿದರೂ, ಕೊಂದರೂ ಹಿಂತಿರುಗುತ್ತೇನೆ'; ಬಾಂಗ್ಲಾದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಘೋಷಣೆ

'ಜೈಲಿಗೆ ಹಾಕಿದರೂ, ಕೊಂದರೂ ಹಿಂತಿರುಗುತ್ತೇನೆ'; ಬಾಂಗ್ಲಾದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಘೋಷಣೆ

ಹೊಸದಿಲ್ಲಿ: ತಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಬಾಂಗ್ಲಾದೇಶಕ್ಕೆ ಮರಳುವುದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ. "ನನ್ನನ್ನು ಜೈಲಿಗೆ ಹಾಕಬಹುದು, ಕೊಲ್ಲಬಹುದು ಅಥವಾ ಏನು ಬೇಕಾದರೂ ಮಾಡಬಹುದು. ಆದರೂ ನಾನು ಬಾಂಗ್ಲಾದೇಶಕ್ಕೆ ಮರಳುತ್ತೇನೆ" ಎಂದು ಅವರು ಹೇಳಿದ್ದಾರೆ.

ಅಧಿಕಾರದಿಂದ ಪದಚ್ಯುತಗೊಂಡ ಬಳಿಕ ಮಾಡಿದ ತಮ್ಮ ಮೊದಲ ಸಾರ್ವಜನಿಕ ವರ್ಚುವಲ್ ಭಾಷಣದಲ್ಲಿ ಮಾತನಾಡಿದ ಅವರು, ತಮ್ಮ ಮರಳುವಿಕೆ ಅಧಿಕಾರಕ್ಕಾಗಿ ಅಲ್ಲ; ದೇಶದಲ್ಲಿ ಭದ್ರತೆ, ಅಭಿವೃದ್ಧಿ, ಸಮೃದ್ಧಿ ಮತ್ತು ಶಾಂತಿಯನ್ನು ಪುನಃಸ್ಥಾಪಿಸಿ ಬಾಂಗ್ಲಾದೇಶವನ್ನು ಸರಿಯಾದ ಹಾದಿಗೆ ತರುವುದಕ್ಕಾಗಿ ಎಂದು ಹೇಳಿದರು. "ಭಯವು ನನ್ನ ಜನರ ಮೇಲಿನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾನು ನನ್ನ ಜನರ ಬಳಿಗೆ ಹಿಂತಿರುಗುತ್ತೇನೆ. ನನಗೆ ಅವರ ಮೇಲೆ ನಂಬಿಕೆಯಿದೆ. ನಿಜವಾದ ಶಕ್ತಿ ಜನರಲ್ಲಿದೆ" ಎಂದರು.

1981ರಲ್ಲಿ ಆಗಿನ ಅಧ್ಯಕ್ಷ ಝಿಯಾವುರ್ ರೆಹಮಾನ್ ತಮ್ಮನ್ನು ಬಾಂಗ್ಲಾದೇಶಕ್ಕೆ ಮರಳದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೆ ಆಗಲೂ ತಾನು ದೇಶಕ್ಕೆ ಮರಳಿದ್ದೆ. ಈಗಲೂ ಯಾವುದೇ ಅಡೆತಡೆ ತಮ್ಮನ್ನು ತಡೆಯುವುದಿಲ್ಲ ಎಂದು ಹಸೀನಾ ಹೇಳಿದರು.

ಅವಾಮಿ ಲೀಗ್‌ನ ಸಾವಿರಾರು ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆಗೆ ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ವಕೀಲರು, ನ್ಯಾಯಾಧೀಶರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಬಂಧನ, ಚಿತ್ರಹಿಂಸೆ ಮತ್ತು ಹಿಂಸಾಚಾರಕ್ಕೆ ಒಳಗಾಗಿದ್ದಾರೆ ಎಂದು ಹಸೀನಾ ಆರೋಪಿಸಿದರು.

2024ರ ಚಳುವಳಿ ಬಳಿಕ ಸಂವಿಧಾನದ ಮೇಲೆಯೇ ಸಂಘಟಿತ ದಾಳಿ ನಡೆದಿದ್ದು, ಪ್ರಸ್ತುತ ಆಡಳಿತವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದರ ಜೊತೆಗೆ ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದವರನ್ನೂ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ ಸರಕಾರವು ಪ್ರತಿ ತಿಂಗಳು ಬಾಂಗ್ಲಾದೇಶ ಬ್ಯಾಂಕಿನಿಂದ 700ರಿಂದ 900 ಕೋಟಿ ಟಾಕಾ ಸಾಲ ಪಡೆದು ಸರಕಾರ ನಡೆಸುತ್ತಿದೆ. ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದು, ಹಲವಾರು ಕೈಗಾರಿಕೋದ್ಯಮಿಗಳು ಹಾಗೂ ವ್ಯಾಪಾರಿಗಳು ದೇಶ ತೊರೆದಿದ್ದಾರೆ ಅಥವಾ ತಲೆಮರೆಸಿಕೊಂಡಿದ್ದಾರೆ ಎಂದು ಶೇಖ್‌ ಹಸೀನಾ ಉಲ್ಲೇಖಿಸಿದರು.

ತಮ್ಮ ಅಧಿಕಾರಚ್ಯುತಿಯ ಬಳಿಕ ಬಾಂಗ್ಲಾದೇಶದ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಜಿಡಿಪಿ ಬೆಳವಣಿಗೆ ನಿಧಾನಗೊಂಡಿದೆ, ಹಲವು ದಶಕಗಳಲ್ಲೇ ಮೊದಲ ಬಾರಿಗೆ ಕೈಗಾರಿಕಾ ಉತ್ಪಾದನೆ ಕುಸಿದಿದೆ, ಬ್ಯಾಂಕ್‌ಗಳ ದಿವಾಳಿತನ ಹೆಚ್ಚಾಗಿದೆ, ಬಡತನ ಏರಿಕೆಯಾಗಿದೆ ಹಾಗೂ ಹೂಡಿಕೆ ಕಡಿಮೆಯಾಗಿದೆ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi