Dailyhunt
Jammu and Kashmir | ಗಾಂದರ್ಬಲ್ ಎನ್‌ಕೌಂಟರ್; ನ್ಯಾಯಾಂಗ ತನಿಖೆಗೆ ಆದೇಶ

Jammu and Kashmir | ಗಾಂದರ್ಬಲ್ ಎನ್‌ಕೌಂಟರ್; ನ್ಯಾಯಾಂಗ ತನಿಖೆಗೆ ಆದೇಶ

ಶ್ರೀನಗರ, ಎ.3: ಗಾಂದರ್ಬಲ್ ಜಿಲ್ಲೆಯ ಅರಹ್ಮಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ.

ಈ ಪ್ರಕರಣದ ಕುರಿತು ಕೂಲಂಕಷ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ 7 ದಿನಗಳೊಳಗೆ ಗೃಹ ಇಲಾಖೆಗೆ ವರದಿ ಸಲ್ಲಿಸುವಂತೆ ಜಿಲ್ಲಾ ದಂಡಾಧಿಕಾರಿಗೆ ಸೂಚಿಸಲಾಗಿದೆ.

ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ರಶೀದ್ ಅಹ್ಮದ್ ಮುಘಲ್ ಹತ್ಯೆಯಾಗಿದ್ದಾರೆ ಎಂಬ ಸೇನೆಯ ಹೇಳಿಕೆಯನ್ನು ಕುಟುಂಬ ಸದಸ್ಯರು ವಿರೋಧಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ.

ರಶೀದ್‌ಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಕುಟುಂಬ ಹೇಳಿದೆ.

"ರಶೀದ್ ಮಾರ್ಚ್ 31ರಂದು ಬೆಳಗ್ಗೆ ಮನೆಯಿಂದ ತೆರಳಿದ್ದ. ಆದರೆ ಹಿಂದಿರುಗಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು" ಎಂದು ಸಹೋದರ ಏಜಾಝ್ ಅಹ್ಮದ್ ಮುಘಲ್ ತಿಳಿಸಿದ್ದಾರೆ.

"ನಂತರ ಶ್ರೀನಗರದಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ರಶೀದ್‌ ನ ಮೃತದೇಹವನ್ನು ಗುರುತಿಸಿದೆ" ಎಂದೂ ಅವರು ಹೇಳಿದ್ದಾರೆ.

ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ಉತ್ತರ ಕಾಶ್ಮೀರದಲ್ಲಿ ದಫನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತ್ಯಕ್ರಿಯೆಗೆ ಮೃತದೇಹ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕುಟುಂಬ ಆಗ್ರಹಿಸಿದೆ.

ಕುಟುಂಬದ ಪ್ರಕಾರ, ರಶೀದ್ ವಿದ್ಯಾವಂತನಾಗಿದ್ದು ಎಂಕಾಂ ಪದವಿ ಪಡೆದಿದ್ದ. ಸ್ಥಳೀಯರಿಗೆ ದಾಖಲೆ ಸಂಬಂಧಿತ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi