Dailyhunt Logo
  • Light mode
    Follow system
    Dark mode
    • Play Story
    • App Story
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಎಐ ಕಣ್ಗಾವಲು; ಪ್ರತಿಭಟನಾಕಾರರ ಆರೋಪ: ವರದಿ

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಎಐ ಕಣ್ಗಾವಲು; ಪ್ರತಿಭಟನಾಕಾರರ ಆರೋಪ: ವರದಿ

ಹೊಸದಿಲ್ಲಿ : ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದಿಲ್ಲಿ ಪೊಲೀಸರು ಸುಧಾರಿತ ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕಣ್ಗಾವಲು ಉಪಕರಣಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಎಐ ಚಾಲಿತ ಮುಖ ಗುರುತಿಸುವಿಕೆ ಸೌಲಭ್ಯ ಹೊಂದಿರುವ ವಾಹನಗಳ ವೀಡಿಯೊಗಳು ವೈರಲ್ ಆಗಿದ್ದು, ಪೊಲೀಸರು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.

ಈ ತಂತ್ರಜ್ಞಾನವನ್ನು ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲು ಮತ್ತು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುತ್ತಿರುವ ನಾಗರಿಕರನ್ನು ಹೆದರಿಸಲು ಬಳಸಲಾಗುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ದಿಲ್ಲಿ ಪೊಲೀಸರು, ಸಮಾಜಘಾತುಕ ಶಕ್ತಿಗಳು, ಅಪರಾಧಿಗಳು ಮತ್ತು ತಲೆಮರೆಸಿಕೊಂಡಿರುವ ವ್ಯಕ್ತಿಗಳು ಈ ಸೂಕ್ಷ್ಮ ಪ್ರದೇಶವನ್ನು ಪ್ರವೇಶಿಸುವುದನ್ನು ತಡೆಯಲು ಮುಖ ಗುರುತಿಸುವ ವ್ಯವಸ್ಥೆಯ (FRS) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆಯೂ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಇಂತಹ ವ್ಯವಸ್ಥೆಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳದಲ್ಲಿ ಎಐ ತಂತ್ರಜ್ಞಾನ ಹೊಂದಿರುವ "ಇಕ್ಷಣ" ಎಂಬ ಸಂಚಾರಿ ಕಮಾಂಡ್ ಮತ್ತು ಕಂಟ್ರೋಲ್ ವಾಹನವನ್ನು ಸಹ ನಿಯೋಜಿಸಿದ್ದಾರೆ ಎಂದು ವರದಿಯಾಗಿದೆ. ಎಐ ಕ್ಯಾಮೆರಾಗಳು, ಪಿಟಿಝಡ್ ನೈಟ್-ವಿಷನ್ ಕ್ಯಾಮೆರಾಗಳು, ಎಎನ್‌ಪಿಆರ್ ವ್ಯವಸ್ಥೆಗಳು ಮತ್ತು ರಿಯಲ್-ಟೈಮ್ ಮಾನಿಟರಿಂಗ್ ಸ್ಕ್ರೀನ್‌ಗಳನ್ನು ಹೊಂದಿರುವ ಈ ವಾಹನವು ಸಂಚಾರಿ ನಿಯಂತ್ರಣ ಕೊಠಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚುವರಿಯಾಗಿ, ಸಿಬ್ಬಂದಿಗೆ ಎಐ ಚಾಲಿತ ಸ್ಮಾರ್ಟ್ ಗ್ಲಾಸ್‌ಗಳನ್ನು ನೀಡಲಾಗಿದ್ದು, ಇವು ಜನಸಂದಣಿಯಲ್ಲಿ ಮುಖಗಳನ್ನು ಸ್ಕ್ಯಾನ್ ಮಾಡಿ ಶಂಕಿತರ ಬಗ್ಗೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡುವ ಸಾಮರ್ಥ್ಯ ಹೊಂದಿವೆ.

ಈತನ್ಮಧ್ಯೆ, ಈ ಹಸ್ತಕ್ಷೇಪದ ಕಣ್ಗಾವಲು ವಿರುದ್ಧ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಐಶೆ ಘೋಷ್, ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯು ಜುಲೈ 27ಕ್ಕೆ ನಿಗದಿಯಾಗಿದೆ.

ಸಾಮಾಜಿಕ ಹಿತಾಸಕ್ತಿ, ಕಾನೂನು-ಸುವ್ಯವಸ್ಥೆ ಮತ್ತು ಭದ್ರತಾ ಕಾರಣಗಳಿಗಾಗಿ ಪ್ರತಿಭಟನೆಯ ವೀಡಿಯೋಗ್ರಫಿ ಮಾಡಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಗೌಪ್ಯತೆಯ ಹಕ್ಕಿನ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಜುಲೈ 20ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸಲು ದಿಲ್ಲಿ ಪೊಲೀಸರು ಸಾವಿರಾರು ವೀಡಿಯೊಗಳು, ಸಿಸಿಟಿವಿ ದೃಶ್ಯಾವಳಿಗಳು, ಸಾಮಾಜಿಕ ಜಾಲತಾಣಗಳ ಲೈವ್‌ಸ್ಟ್ರೀಮ್‌ಗಳು ಮತ್ತು ಮೊಬೈಲ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi