Dailyhunt Logo
  • Light mode
    Follow system
    Dark mode
    • Play Story
    • App Story
ಜೇಬುಗಳ್ಳರಿದ್ದಾರೆ, ಎಚ್ಚರ; CBSE ಮರುಮೌಲ್ಯಮಾಪನ ವೆಚ್ಚದ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ಜೇಬುಗಳ್ಳರಿದ್ದಾರೆ, ಎಚ್ಚರ; CBSE ಮರುಮೌಲ್ಯಮಾಪನ ವೆಚ್ಚದ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ, ಜೂ. 1: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಮರುಮೌಲ್ಯಮಾಪನ ಪ್ರಕ್ರಿಯೆ ಮತ್ತು ಅದರ ವೆಚ್ಚದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿಕ್ಷಣವನ್ನು ಸೇವೆಯಾಗಿ ನೋಡದೆ ವ್ಯವಹಾರವಾಗಿ ನೋಡಿದಾಗ, ತಪ್ಪುಗಳನ್ನು ಸರಿಪಡಿಸುವ ಬದಲು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಂಡಳಿಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಿಂದಾಗಿ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ತಾನು ನಡೆಸಿದ ಸಂಭಾಷಣೆಯ ವಿಡಿಯೊ ತುಣುಕೊಂದನ್ನು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.

''ಜೇಬುಗಳ್ಳರಿದ್ದಾರೆ, ಎಚ್ಚರ. ಇಂದು ಅವರು CBSE ಒಳಗಡೆಯೇ ಕುಳಿತಿದ್ದಾರೆ. CBSE ದೋಷಗಳಿಂದಾಗಿ ನಿಮ್ಮ ಅಂಕಗಳು ತಪ್ಪಾಗಿದ್ದರೆ, ನಿಮಗೆ ಸಿಗುವುದೇನು? ಒಂದು ಬಿಲ್: ಡಿಜಿಟಲ್ ಸ್ಕ್ಯಾನ್ ಮಾಡಿದ ಪ್ರತಿ - ಪ್ರತಿ ವಿಷಯಕ್ಕೆ 100 ರೂ. ಮರುಎಣಿಕೆ (Re-totalling) - ಪ್ರತಿ ಪೇಪರ್ಗೆ 100 ರೂ. ಮರುಮೌಲ್ಯಮಾಪನ (Re-evaluation) - ಪ್ರತಿ ಪ್ರಶ್ನೆಗೆ 25 ರೂ.'' ಎಂದು ರಾಹುಲ್ ಗಾಂಧಿ ವಿಡಿಯೊ ಕ್ಲಿಪ್ ಜೊತೆಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ತನ್ನದೇ ಉತ್ತರ ಪತ್ರಿಕೆಯ ನಿಖರವಾದ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ಒಬ್ಬ ವಿದ್ಯಾರ್ಥಿ 2,000 ರೂ. ವರೆಗೆ ಪಾವತಿಸಬೇಕಾಗಬಹುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕನೂ ಆಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ.

''ನಾಲ್ಕು ಲಕ್ಷ ವಿದ್ಯಾರ್ಥಿಗಳು ಇಂತಹ ಅರ್ಜಿಗಳನ್ನು ಸಲ್ಲಿಸಿದಾಗ CBSE ಎಷ್ಟು ಆದಾಯ ಗಳಿಸುತ್ತದೆ ಎಂಬುದನ್ನು ನೀವೇ ಊಹಿಸಿ'' ಎಂದು ಅವರು ಹೇಳಿದ್ದಾರೆ.

►ಮಂಡಳಿಯ ತಪ್ಪುಗಳ ವೆಚ್ಚ ವಿದ್ಯಾರ್ಥಿ ತಲೆಗೆ

ಮೊಬೈಲ್ ಫೋನ್ ಗಳಿಂದ ಸ್ಕ್ಯಾನಿಂಗ್ ಮಾಡಿದಾಗ ತಪ್ಪು ಅಂಕಗಳು ಬರುವುದು ಸಹಜ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ಆ ತಪ್ಪುಗಳನ್ನು ಸರಿಪಡಿಸುವ ವೆಚ್ಚವನ್ನು ವಿದ್ಯಾರ್ಥಿಗಳೇ ಭರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

''ತಪ್ಪು CBSEಯದ್ದು, ಶಿಕ್ಷೆ ವಿದ್ಯಾರ್ಥಿಗೆ. ಲಾಭ ಸರ್ಕಾರಕ್ಕೆ'' ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

''ಶಿಕ್ಷಣವನ್ನು ಸೇವೆಯಾಗಿ ನೋಡದೆ, ವ್ಯವಹಾರವಾಗಿ ನೋಡಿದಾಗ ತಪ್ಪುಗಳನ್ನು ಸರಿಪಡಿಸಲಾಗುವುದಿಲ್ಲ; ಅವುಗಳನ್ನು ಹೆಚ್ಚಿಸಲಾಗುತ್ತದೆ. ಮತ್ತು ಇದಕ್ಕೆ ತೆರಬೇಕಾದ ಭಾರೀ ಬೆಲೆಯನ್ನು ನಮ್ಮ ಮಕ್ಕಳು ತಮ್ಮ ಸಮಯ, ಆತ್ಮವಿಶ್ವಾಸ ಮತ್ತು ಭವಿಷ್ಯವನ್ನು ಪಣವಿಟ್ಟು ತೆರುತ್ತಿದ್ದಾರೆ'' ಎಂದು ಗಾಂಧಿ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi