ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಜಿಬಿಎ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡ ನಿರ್ಮಾಣದಾರರ ಸಂಕಷ್ಟವನ್ನು ಪರಿಗಣಿಸಿ, ಕಟ್ಟಡ ನಿರ್ಮಾಣಗಳಲ್ಲಿನ ಉಲ್ಲಂಘನೆ ಮಿತಿಯನ್ನು ಹಾಲಿ ಇರುವ ಶೇ.5 ರಿಂದ ಶೇ.15ಕ್ಕೆ ಹೆಚ್ಚಿಸಲು ಸರಕಾರವು ಮಹತ್ವಪೂರ್ಣವಾದ ಮತ್ತು ಜನಪರವಾದ ನಿರ್ಧಾರವನ್ನು ಕೈಗೊಂಡಿದೆ ಎಂದಿದ್ದಾರೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಭೂಮಿಯ ಅತೀವವಾದ ಬೆಲೆಯಿಂದ ಮತ್ತು ಹಲವು ಅನಿವಾರ್ಯ ಕಾರಣಗಳಿಂದ ನಿವೇಶನ ಮಾಲಕರು ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಡಿಮೆ ನಡುಜಾಗಗಳನ್ನು ಬಿಟ್ಟು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಸಂಕಷ್ಟ ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಕಾರಣ ಹಾಲಿ ನಿಯಮಗಳಲ್ಲಿ ಶೇ.5ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.
ಆದುದರಿಂದ ವಾಸ್ತವಿಕ ಅಂಶಗಳನ್ನು ಮನಗಂಡು ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಕಟ್ಟಡ ಉಪವಿಧಿಗಳು 2003 ರ ಉಪವಿಧಿ 6ಕ್ಕೆ ತಿದ್ದುಪಡಿ ತಂದು, ಕಟ್ಟಡಗಳ ಉಲ್ಲಂಘನೆ ಮಿತಿಯನ್ನು ಶೇ.5 ರ ಬದಲಾಗಿ ಶೇ.15 ರವರೆಗೆ ಹೆಚ್ಚಿಸಿ, ಅದಕ್ಕೆ ದಂಡ ಪಾವತಿಸಿಕೊಂಡು ಕ್ರಮಬದ್ದಗೊಳಿಸಲು ಸರಕಾರವು ತೀರ್ಮಾನಿಸಿರುತ್ತದೆ. ಅದರಂತೆ ಬೆಂಗಳೂರು ನಗರದ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಎಲ್ಲ 5 ನಗರ ಪಾಲಿಕೆಗಳಿಂದ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಈ ಅಧಿಸೂಚನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಂತರ್ಜಾಲ https://updates.bbmpgov.in/public ರಲ್ಲಿ ವೀಕ್ಷಿಸಬಹುದಾಗಿದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಆಯಾ ನಗರಪಾಲಿಕೆ ಕಛೇರಿಗಳ ವಿಳಾಸಕ್ಕೆ ಕಳುಹಿಸಬಹುದಾಗಿದೆ.

