Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಬಂಗಾಳಿ ಮುಸ್ಲಿಂ ಕಾರ್ಮಿಕರ ಪೌರತ್ವ ಪರಿಶೀಲನೆ

ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಬಂಗಾಳಿ ಮುಸ್ಲಿಂ ಕಾರ್ಮಿಕರ ಪೌರತ್ವ ಪರಿಶೀಲನೆ

ಬೆಂಗಳೂರು, ಸೆ.1: ದಾಖಲೆರಹಿತ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ನಡೆಸಿದ 'ಆಪರೇಷನ್ ಮುಕ್ತ' ವಿಶೇಷ ಕಾರ್ಯಾಚರಣೆಯಲ್ಲಿ ನೂರಾರು ಭಾರತೀಯ ನಾಗರಿಕರನ್ನು ಬಂಧಿಸಿ ಕಿರುಕುಳ ನೀಡಲಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ನಿವಾಸಿಗಳು ಆರೋಪಿಸಿದ್ದಾರೆ ಎಂದು scroll.in ವರದಿ ಮಾಡಿದೆ.

ಬಂಗಾಳಿ ಮಾತನಾಡುವ ಮುಸ್ಲಿಂ ಕಾರ್ಮಿಕರನ್ನೇ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಗುರಿಯಾಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ನಗರದ 90 ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 3,000 ಬಂಗಾಳಿ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಟನ್ ಗಟ್ಟಲೆ ಕಸ ಮತ್ತು ತ್ಯಾಜ್ಯವನ್ನು ಸಂಗ್ರಹಿಸಿ, ವಿಂಗಡಿಸುವ ಕೆಲಸವನ್ನು ಇವರಲ್ಲಿ ಹಲವರು ಮಾಡುತ್ತಾರೆ.

ಬಂಧಿಸಲಾದ 3,000 ಮಂದಿಯಲ್ಲಿ ಕೇವಲ 105 ಮಂದಿ ಮಾತ್ರ ಬಾಂಗ್ಲಾದೇಶದಿಂದ ಬಂದ ದಾಖಲೆರಹಿತ ವಲಸಿಗರು ಎಂದು ಪತ್ತೆಯಾಗಿದೆ ಎಂದು 'Times of India' ವರದಿ ಮಾಡಿದೆ.

ನೂರಾರು ಕಾರ್ಮಿಕರನ್ನು ಬಂಧನ ಕೇಂದ್ರಗಳು, ಮದುವೆ ಮಂಟಪಗಳು ಮತ್ತು ಹೋಟೆಲ್ಗಳಲ್ಲಿ 12ರಿಂದ 14 ಗಂಟೆಗಳವರೆಗೆ ಇರಿಸಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಕಾರ್ಯಕರ್ತರು ಹೇಳಿದ್ದಾರೆ.

►ಹೈಕೋರ್ಟ್ ನಿಂದ ಭಾರತೀಯರೆಂದು ಘೋಷಣೆ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ 32 ವರ್ಷದ ರಫಿಕುಲ್ ಬಿಸ್ವಾಸ್ ಅವರ ಪ್ರಕರಣ ಈ ವಿಚಾರದಲ್ಲಿ ಪ್ರಮುಖವಾಗಿದೆ.

2025ರ ಆಗಸ್ಟ್ 28ರಂದು ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿನ ಮನೆಯಿಂದ ಬಿಸ್ವಾಸ್ ಅವರನ್ನು ಬಂಡೇಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಕರೆದುಕೊಂಡು ಹೋಗಿದ್ದರು. ಮರುದಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅವರನ್ನು ಬಂಧನ ಕೇಂದ್ರದಲ್ಲಿ ಇರಿಸುವಂತೆ ಆದೇಶಿಸಿತ್ತು.

'ನನಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಆರಂಭದಲ್ಲಿ ನನ್ನನ್ನು ಏಕೆ ಬಂಧಿಸಲಾಗಿದೆ ಎಂಬುದನ್ನೂ ತಿಳಿಸಲಿಲ್ಲ' ಎಂದು ಬಿಸ್ವಾಸ್ 'scroll.in'ಗೆ ತಿಳಿಸಿದ್ದಾರೆ.

ನಂತರ ಪೊಲೀಸರು ಬಾಂಗ್ಲಾದೇಶದ ಗುರುತಿನ ದಾಖಲೆಗಳನ್ನು ತೋರಿಸಿ, ಅವು ಬಿಸ್ವಾಸ್ ಅವರು ಆ ದೇಶದ ಪ್ರಜೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಹೇಳಿದ್ದರು.

ಆದರೆ ಬಿಸ್ವಾಸ್ ಅವರ ಕುಟುಂಬದವರು ಮತ್ತು ಸ್ನೇಹಿತರು ಅವರ ಪಾಸ್ ಪೋರ್ಟ್, ಶಾಲಾ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿಯಲ್ಲಿರುವ ಹೆಸರು, ಆಧಾರ್ ಕಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರು.

ಆದರೂ ಪೊಲೀಸರು ಅವುಗಳನ್ನು ಪರಿಶೀಲಿಸಲು ನಿರಾಕರಿಸಿದ್ದರು ಎಂದು ಬಿಸ್ವಾಸ್ ಮತ್ತು ಅವರ ಪತ್ನಿ ಅಂಗುರಿ ಖಾತುನ್ ಹೇಳಿದ್ದಾರೆ.

'ಇವು ನಕಲಿ ದಾಖಲೆಗಳು ಎಂದು ನಮಗೆ ಹೇಳಲಾಯಿತು' ಎಂದು ಅಂಗುರಿ ಖಾತುನ್ ಹೇಳಿದ್ದಾರೆ.

ಬಿಸ್ವಾಸ್ ಅವರ ಸ್ವಗ್ರಾಮವಿರುವ ನಾಡಿಯಾ ಜಿಲ್ಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿ FRROಗೆ ವರದಿ ಸಲ್ಲಿಸಿದ್ದರು. ಬಿಸ್ವಾಸ್ ಅವರು ಭಾರತೀಯ ಪ್ರಜೆ ಹಾಗೂ ಧನಂಜಯ್ಪುರ ಗ್ರಾಮದ ಖಾಯಂ ನಿವಾಸಿ ಎಂದು ವರದಿಯಲ್ಲಿ ದೃಢಪಡಿಸಲಾಗಿತ್ತು. ಆದರೂ ಅವರನ್ನು ಬಿಡುಗಡೆ ಮಾಡಲಾಗಲಿಲ್ಲ.

ಗುಪ್ತಚರ ಸಂಸ್ಥೆಗಳಿಂದ ಬಂದ ಮಾಹಿತಿಯ ಜತೆಗೆ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶ ನೀಡಿದ ಜನನ ಪ್ರಮಾಣಪತ್ರದ ಆಧಾರದಲ್ಲಿ ಬಿಸ್ವಾಸ್ ಅವರನ್ನು ಬಂಧಿಸಲಾಗಿದೆ ಎಂದು FRRO ವಾದಿಸಿತು.

ಬಿಸ್ವಾಸ್ ಪರ ವಕೀಲ ಕ್ಲಿಫ್ಟನ್ ಡಿ'ರೊಜಾರಿಯೊ ಅವರು ಬಾಂಗ್ಲಾದೇಶದ ಆ ಎರಡು ದಾಖಲೆಗಳು ನಕಲಿ ಎಂದು ವಾದಿಸಿದರು. FRRO ಸೂಕ್ತ ಪ್ರಕ್ರಿಯೆ ಅನುಸರಿಸದೆ ಬಂಧನ ಆದೇಶ ಹೊರಡಿಸಿದೆ ಎಂದೂ ಅವರು ಹೇಳಿದರು.

'ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಲು ಅಧಿಕಾರಿಗಳು ಯಾವುದೇ ಪ್ರಯತ್ನ ಮಾಡಿಲ್ಲ. ಒಬ್ಬ ವ್ಯಕ್ತಿಯ ಪೌರತ್ವವನ್ನು ಇಷ್ಟು ನಿರ್ಲಕ್ಷ್ಯದಿಂದ ಪ್ರಶ್ನಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ನಂತರ ಬಿಸ್ವಾಸ್ ಅವರ ಪತ್ನಿ ಕರ್ನಾಟಕ ಹೈಕೋರ್ಟ್ನಲ್ಲಿ FRRO ಬಂಧನ ಆದೇಶವನ್ನು ಪ್ರಶ್ನಿಸಿದರು.

ಆಗಸ್ಟ್ 4ರಂದು ಕರ್ನಾಟಕ ಹೈಕೋರ್ಟ್ ಬಿಸ್ವಾಸ್ ಅವರು ಭಾರತೀಯ ಪ್ರಜೆ ಎಂದು ಘೋಷಿಸಿತು. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಅವರಿಗೆ ನೀಡಲಾಗಿದ್ದ ಮತದಾರರ ಗುರುತಿನ ಚೀಟಿ ನಿಜವಾದದ್ದು ಎಂದು ನ್ಯಾಯಾಲಯ ಹೇಳಿತು. ಅವರ ಕುಟುಂಬವು 'ತಲೆಮಾರುಗಳಿಂದ' ಭಾರತದಲ್ಲಿ ವಾಸಿಸುತ್ತಿದೆ ಎಂದೂ ನ್ಯಾಯಾಲಯ ಹೇಳಿತು.

'ಕರ್ನಾಟಕ ಹೈಕೋರ್ಟ್ ನನ್ನನ್ನು ಭಾರತೀಯ ಎಂದು ಘೋಷಿಸಿದೆ. ಆದರೆ ನನಗೆ ನ್ಯಾಯ ಎಲ್ಲಿದೆ? ನನ್ನನ್ನು ಬಂಧಿಸಲು ಪೊಲೀಸರು ಈ ಎರಡು ನಕಲಿ ಬಾಂಗ್ಲಾದೇಶಿ ದಾಖಲೆಗಳನ್ನು ಎಲ್ಲಿಂದ ಪಡೆದರು? ನನಗೆ ಉತ್ತರ ಬೇಕು' ಎಂದು ಬಿಸ್ವಾಸ್ ಹೇಳಿದ್ದಾರೆ.

ಆದರೆ ಹೈಕೋರ್ಟ್ ತೀರ್ಪಿನ ನಾಲ್ಕೇ ದಿನಗಳ ಬಳಿಕ, ಆಗಸ್ಟ್ 8ರಂದು ಪೊಲೀಸರು ಮತ್ತೆ ಬಿಸ್ವಾಸ್ ಅವರ ಮನೆಗೆ ತೆರಳಿ ಅವರನ್ನು ಮತ್ತು ಅವರ ಪತ್ನಿಯನ್ನು ಸುತ್ತುವರಿದಿದ್ದರು ಎಂದು ಅವರು ತಿಳಿಸಿದ್ದಾರೆ.

ಬಂಧನ ಕೇಂದ್ರದಲ್ಲಿ ಕಳೆದ ಅವಧಿಯಲ್ಲಿ ಎರಡು ಬಾರಿ ಹೃದಯಾಘಾತವಾಗಿತ್ತು ಎಂದೂ ಬಿಸ್ವಾಸ್ ಹೇಳಿದ್ದಾರೆ.

Anguri Khatun, Rafikul Biswas's wife. Credit: Rokibuz Zaman

►'ದಾಖಲೆ ಪರಿಶೀಲಿಸದೆ ಬಂಧಿಸಿದರು'

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ 56 ವರ್ಷದ ಶೇಖ್ ಖಾದರ್ ಕಳೆದ 21 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆಗಸ್ಟ್ 8ರ ಬೆಳಿಗ್ಗೆ ಪೊಲೀಸರು ತಮ್ಮ ಮನೆಯ ಸಮೀಪದ ರಸ್ತೆಯಿಂದ ತಮ್ಮನ್ನು ಕರೆದುಕೊಂಡು ಹೋದರು ಎಂದು ಅವರು ಹೇಳಿದ್ದಾರೆ.

'ನನಗೆ ಉದ್ದವಾದ ಗಡ್ಡವಿದೆ ಮತ್ತು ನಾನು ಲುಂಗಿ ಧರಿಸುತ್ತೇನೆ. ಪೊಲೀಸರು ನನ್ನನ್ನು ನೋಡಿ, "ನೀವು ಸಂಪೂರ್ಣವಾಗಿ ಬಾಂಗ್ಲಾದೇಶಿ" ಎಂದು ಹೇಳಿದರು. ನನ್ನನ್ನು ಬಂಧಿಸುವ ಮೊದಲು ಯಾವುದೇ ದಾಖಲೆಗಳನ್ನು ಪರಿಶೀಲಿಸಲಿಲ್ಲ' ಎಂದು ಖಾದರ್ ಹೇಳಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ 42 ವರ್ಷದ ಅಬುಲ್ ಕಲಾಂ ಆಝಾದ್ ಅವರು ಮೂರು ತಿಂಗಳ ಹಿಂದೆ ತಮ್ಮ ಸೊಸೆಯ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿದ್ದರು. ಅವರನ್ನು ಒಂದು ದಿನ ಬಂಧನದಲ್ಲಿರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

'ನನ್ನ ವಿರುದ್ಧ ಯಾವುದೇ FIR ಅಥವಾ ದೂರು ಇರಲಿಲ್ಲ. ಆದರೂ ಮರುದಿನ FRROಗೆ ತೆರಳಿ ಬಯೋಮೆಟ್ರಿಕ್ ಮಾಹಿತಿ ನೀಡಬೇಕಾಯಿತು. ನಾನು ಬಾಂಗ್ಲಾದೇಶಿ ಎಂದು ಪೊಲೀಸರು ಶಂಕಿಸಿದ್ದರು' ಎಂದು ಆಜಾದ್ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವೂ ತಮ್ಮ ಪೌರತ್ವವನ್ನು ಪ್ರಶ್ನಿಸುತ್ತದೆ ಎಂದು ತಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಕ್ರ್ಯಾಪ್ ವ್ಯಾಪಾರ ನಡೆಸುತ್ತಿರುವ 47 ವರ್ಷದ ಐಝುವಲ್ ಶೇಖ್, ಆಗಸ್ಟ್ 8ರ ದಾಳಿಯಲ್ಲಿ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಹಲವು ತ್ಯಾಜ್ಯ ವಿಂಗಡಣೆ ಕಾರ್ಮಿಕರನ್ನು ಬಂಧಿಸಿ ಥಳಿಸಲಾಯಿತು ಎಂದು ಆರೋಪಿಸಿದ್ದಾರೆ.

'ಪೊಲೀಸರು ನಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಆದರೆ ನಮ್ಮನ್ನು ಕಳ್ಳರು ಮತ್ತು ಅಪರಾಧಿಗಳಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲ. ನಾವು ಭಾರತೀಯರು, ಬಾಂಗ್ಲಾದೇಶೀಯರಲ್ಲ' ಎಂದು ಅವರು ಹೇಳಿದ್ದಾರೆ.

►ಸಾಮಾಜಿಕ ಕಾರ್ಯಕರ್ತರ ಆಕ್ಷೇಪ

ಈ ಸಾಮೂಹಿಕ ಬಂಧನವು ಕರ್ನಾಟಕದಲ್ಲಿ ಅಭೂತಪೂರ್ವ ಕ್ರಮ ಎಂದು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.

ಬೆಂಗಳೂರು ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಅವಿಸಿಕ್ತ ಅವರ ಪ್ರಕಾರ, ಕಾರ್ಯಾಚರಣೆಯಲ್ಲಿ ನೂರಾರು ಭಾರತೀಯ ನಾಗರಿಕರಿಗೆ ಕಿರುಕುಳ ನೀಡಲಾಗಿದೆ.

'ಕರ್ನಾಟಕದಲ್ಲಿ ಬಂಗಾಳಿ ಕಾರ್ಮಿಕರ ವಿರುದ್ಧ ವ್ಯಾಪಕ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷದ ಭಾಷಣ ನಡೆಯುತ್ತಿದೆ. ಬಂಗಾಳಿ ಮಾತನಾಡುವ ಪ್ರತಿಯೊಬ್ಬ ಅನೌಪಚಾರಿಕ ಕಾರ್ಮಿಕನನ್ನೂ ಬಾಂಗ್ಲಾದೇಶಿ ಎಂದು ಶಂಕಿಸಲಾಗುತ್ತಿದೆ. ಸಂವಿಧಾನದ ನಿಯಮಗಳನ್ನು ಪಾಲಿಸುವ ಬದಲು ಕಾಂಗ್ರೆಸ್ ಸರ್ಕಾರವೂ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂಬಂತೆ ಕಾಣುತ್ತಿದೆ' ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ 12 ವರ್ಷಕ್ಕೂ ಹೆಚ್ಚು ಕಾಲ ವಾಸಿಸುತ್ತಿರುವ ಬಿಸ್ವಾಸ್ ಕೂಡ ಕಾಂಗ್ರೆಸ್ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಇದು ಕಾಂಗ್ರೆಸ್ ಸರ್ಕಾರ. ಆದರೆ ಅದರ ವರ್ತನೆ ಬಿಜೆಪಿಯಂತಿದೆ' ಎಂದು ಅವರು ಹೇಳಿದ್ದಾರೆ.

ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು 'scroll.in' ಸಂಪರ್ಕಿಸಿದೆ. ಕಾರ್ಯಾಚರಣೆಯ ಹಿಂದಿನ ಕಾರಣ ಮತ್ತು ಭಾರತೀಯ ನಾಗರಿಕರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಕೇಳಲಾಗಿದೆ. ಪ್ರತಿಕ್ರಿಯೆ ಬಂದರೆ ಸುದ್ದಿಯನ್ನು ನವೀಕರಿಸಲಾಗುವುದು ಎಂದು 'scroll.in' ತಿಳಿಸಿದೆ.

Abul Kalam Azad, a 42-year-old resident of Murshidabad who came to the city for his niece's treatment, said he was detained for close to a day. Credit: Rokibuz Zaman.

►'ಬಡ ಕಾರ್ಮಿಕರು ಪರೋಕ್ಷವಾಗಿ ಬಲಿಯಾಗುತ್ತಿದ್ದಾರೆ'

ಬೆಂಗಳೂರಿನಲ್ಲಿ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರು ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅವರಲ್ಲಿ ಹಲವರು ತ್ಯಾಜ್ಯ ವಿಂಗಡಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.

ಆದರೆ ಈ ಪರಿಸ್ಥಿತಿಯ 'ಪರೋಕ್ಷ ಹಾನಿ'ಯನ್ನು ಭಾರತೀಯ ಬಂಗಾಳಿ ಮುಸ್ಲಿಮರು ಅನುಭವಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ದಶಕಗಳಿಂದ ಬೆಂಗಳೂರಿನಲ್ಲಿ ಬಂಗಾಳಿ ಮುಸ್ಲಿಮರೊಂದಿಗೆ ಕೆಲಸ ಮಾಡುತ್ತಿರುವ ಅಖಿಲ ಭಾರತ ಶ್ರಮಿಕ್ ಸ್ವರಾಜ್ ಕೇಂದ್ರದ ಸದಸ್ಯ ಆರ್. ಕಲೀಮ್ ಉಲ್ಲಾ ಅವರ ಪ್ರಕಾರ, ದಾಖಲೆರಹಿತ ಬಾಂಗ್ಲಾದೇಶಿ ಕಾರ್ಮಿಕರನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ನೇಮಿಸಿಕೊಂಡು ಶೋಷಿಸಲಾಗುತ್ತದೆ.

ಬಾಂಗ್ಲಾದೇಶಿ ವಲಸಿಗರ ಉಪಸ್ಥಿತಿಯ ಬಗ್ಗೆ ಪೊಲೀಸರು ಹಾಗೂ ರಾಜಕೀಯ ಪಕ್ಷಗಳಿಗೆ ತಿಳಿದಿದೆ ಎಂದೂ ಅವರು ಹೇಳಿದ್ದಾರೆ.

'ಬಾಂಗ್ಲಾದೇಶಿ ವಲಸಿಗರು ವಾಸಿಸುವ ಪ್ರದೇಶಗಳು ಮತ್ತು ಭಾರತೀಯ ಬಂಗಾಳಿ ಕಾರ್ಮಿಕರು ವಾಸಿಸುವ ಪ್ರದೇಶಗಳು ಯಾವುವು ಎಂಬುದು ಪೊಲೀಸರಿಗೆ ಸಂಪೂರ್ಣವಾಗಿ ತಿಳಿದಿದೆ' ಎಂದು ಕಲೀಮ್ ಉಲ್ಲಾ ಹೇಳಿದ್ದಾರೆ.

ಬೆಂಗಳೂರಿನ ಬಲಪಂಥೀಯ ಕಾರ್ಯಕರ್ತರ ಒತ್ತಡದಿಂದಾಗಿ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಆರಂಭಿಸಲು ಮುಂದಾಯಿತು ಎಂದು ಅವರು ಆರೋಪಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆಗೆ ಮುನ್ನ ಹಲವು ಹಿಂದುತ್ವ ಕಾರ್ಯಕರ್ತರು ವಲಸೆ ಕಾರ್ಮಿಕರನ್ನು ತಡೆದು ವಿಚಾರಣೆ ನಡೆಸಿದ್ದರು. ಅವರನ್ನು ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರು ಎಂದು ಆರೋಪಿಸಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

'ಕಾಂಗ್ರೆಸ್ ಸರ್ಕಾರ ಒತ್ತಡಕ್ಕೆ ಒಳಗಾಯಿತು. ಈಗ ಬಡ ವಲಸೆ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ' ಎಂದು ಕಲೀಮ್ ಉಲ್ಲಾ ಆರೋಪಿಸಿದ್ದಾರೆ.

ಭಾರತೀಯ ಬಂಗಾಳಿ ಮುಸ್ಲಿಮರು ಈ ಬೆಳವಣಿಗೆಯಿಂದ 'ಪರೋಕ್ಷ ಹಾನಿಗೆ' ಒಳಗಾಗುತ್ತಿದ್ದಾರೆ ಎಂದು ಅವಿಸಿಕ್ತ ಹೇಳಿದ್ದಾರೆ.

A settlement of waste workers in Hebbal, north Bangalore. Credit: Rokibuz Zaman.

►ಬಂಧನದ ಬಳಿಕ ಜೀವನ ಸಂಕಷ್ಟ

ಪೌರತ್ವದ ವಿಚಾರಣೆ ರಫಿಕುಲ್ ಬಿಸ್ವಾಸ್ ಅವರ ಜೀವನವನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ ಎಂದು ಅವರು ಹೇಳಿದ್ದಾರೆ.

ತಾವು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಚಾಲಕನಾಗಿದ್ದ ಉದ್ಯೋಗವನ್ನು ಅವರು ಕಳೆದುಕೊಂಡಿದ್ದಾರೆ. ಎಪ್ರಿಲ್ ನಲ್ಲಿ ಅವರ ಸ್ಕ್ರ್ಯಾಪ್ ಗೋದಾಮು ಮತ್ತು ವಾಸಿಸುತ್ತಿದ್ದ ಗುಡಿಸಲಿನ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಗಳ ಶಾಲಾ ಶುಲ್ಕ ಪಾವತಿಸಲು ಪಶ್ಚಿಮ ಬಂಗಾಳದ ಬಡ್ಡಿದಾರರಿಂದ ಸಾಲ ಪಡೆಯಬೇಕಾಯಿತು ಎಂದೂ ಅವರು ಹೇಳಿದ್ದಾರೆ.

ಬಂಧನ ಕೇಂದ್ರದಲ್ಲಿ ತಮ್ಮನ್ನು ಏಕಾಂತ ಬಂಧನದಲ್ಲಿರಿಸಲಾಗಿತ್ತು. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಿತು ಎಂದು ಬಿಸ್ವಾಸ್ ಆರೋಪಿಸಿದ್ದಾರೆ.

'ನಾನು ತಿಂಗಳುಗಟ್ಟಲೆ ಸೂರ್ಯನನ್ನೇ ನೋಡಲಿಲ್ಲ. ಪ್ರತಿ ಗಂಟೆಯೂ ಒಂದು ವರ್ಷದಂತೆ ಭಾಸವಾಗುತ್ತಿತ್ತು' ಎಂದು ಅವರು ಹೇಳಿದ್ದಾರೆ.

ಬಂಗಾಳಿ ಮುಸ್ಲಿಂ ಆಗಿರುವ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರ ತಮ್ಮ ಭಾರತೀಯ ಪೌರತ್ವವನ್ನು ಪ್ರಶ್ನಿಸಿರಬಹುದು ಎಂಬ ಆತಂಕವನ್ನು ಬಿಸ್ವಾಸ್ ವ್ಯಕ್ತಪಡಿಸಿದ್ದಾರೆ.

'ನನಗೆ ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುತ್ತೇನೆ. ನಿಮ್ಮ ಮತ್ತು ಬಿಜೆಪಿಯ ನಡುವಿನ ವ್ಯತ್ಯಾಸವೇನು? ಎಂದು ಕೇಳುತ್ತೇನೆʼ ಎಂದು ಅವರು ಹೇಳಿದ್ದಾರೆ.

ಸೌಜನ್ಯ: scroll.in

Dailyhunt
Disclaimer: This content has not been generated, created or edited by Dailyhunt. Publisher: Varthabharathi