Dailyhunt
ಕಾಂಗ್ರೆಸ್ ಅಧ್ಯಕ್ಷನಾಗುತ್ತೇನೆಂಬ ವರದಿ ತಳ್ಳಿ ಹಾಕಿದ ಕಮಲ್ ನಾಥ್

ಕಾಂಗ್ರೆಸ್ ಅಧ್ಯಕ್ಷನಾಗುತ್ತೇನೆಂಬ ವರದಿ ತಳ್ಳಿ ಹಾಕಿದ ಕಮಲ್ ನಾಥ್

ಹೊಸದಿಲ್ಲಿ: ಕಾಂಗ್ರೆಸ್ ನ ಹಿರಿಯ ಮುಖಂಡ ಕಮಲ್ ನಾಥ್ ಅವರು ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ನಂತರ ತಾನು ಪಕ್ಷದ ಅಧ್ಯಕ್ಷನಾಗಿ ಭಡ್ತಿ ಪಡೆಯಲಿದ್ದೇನೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.

"ನಾನು ಕಾಂಗ್ರೆಸ್ ಅಧ್ಯಕ್ಷನಾಗುವ ಬಗ್ಗೆ ಮಾತನಾಡುವುದು ಮೂರ್ಖತನವಾಗಿದೆ. ನಾನು ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿರುತ್ತೇನೆ ಮತ್ತು ಪಕ್ಷಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತಿರುತ್ತೇನೆ" ಎಂದು ಕಮಲ್ ನಾಥ್ NDTVಗೆ ತಿಳಿಸಿದರು.

ಇಂದಿನ ಚರ್ಚೆಗಳು ಪಕ್ಷದ ಪಂಜಾಬ್ ಬಿಕ್ಕಟ್ಟನ್ನು ಕೇಂದ್ರೀಕರಿಸಿತ್ತು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹೇಳಿದ್ದಾರೆ.

ಕಮಲ್ ನಾಥ್ ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಆಪ್ತರಾಗಿದ್ದಾರೆಂದು ನಂಬಲಾಗಿದೆ. ನವಜೋತ್ ಸಿಂಗ್ ಸಿಧು ಅವರೊಂದಿಗಿನ ಅಮರಿಂದರ್ ದ್ವೇಷವು ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗೆ ಮುನ್ನ ಪಕ್ಷಕ್ಕೆ ಭಾರೀ ಸಮಸ್ಯೆಯಾಗಿದೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಥವಾ ಉಪಾಧ್ಯಕ್ಷರನ್ನು ನೇಮಿಸುವ ಕುರಿತು ಸದ್ಯ ಯಾವುದೇ ಯೋಜನೆ ಇಲ್ಲ ಎಂದು ಉನ್ನತ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವ ಸಾಂಸ್ಥಿಕ ಚುನಾವಣೆಗಳು ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi