ಟೆಹರಾನ್: ಕದನವಿರಾಮದ ಬಳಿಕ ಇರಾನ್ ವಿರುದ್ಧ ನಡೆಯುವ ಯಾವುದೇ ಹೊಸ ದಾಳಿಗೆ ಪ್ರತಿಕ್ರಿಯಿಸಲು ತಾವು ಸಿದ್ಧರಾಗಿದ್ದೇವೆ ಎಂದು ಇರಾನ್‌ನ ರೆವೆಲ್ಯೂಶನರಿ ಗಾರ್ಡ್ಸ್ ಬುಧವಾರ ತಿಳಿಸಿದ್ದು, ಅಮೆರಿಕಕ್ಕೆ ಸಹಕಾರ ನೀಡುವುದರ ವಿರುದ್ಧ ಗಲ್ಫ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
''ನಮ್ಮ ಪಡೆಗಳ ಕೈಗಳು ಬಂದೂಕಿನ ಟ್ರಿಗ್ಗರ್ ಮೇಲೆಯೇ ಇದ್ದು, ಶತ್ರುವು ತಪ್ಪು ಲೆಕ್ಕಾಚಾರಗಳನ್ನು ಪುನರಾವರ್ತಿಸಿದಲ್ಲಿ, ತಾವು ಕಾರ್ಯಾಚರಿಸಲು ಸನ್ನದ್ಧರಾಗಿದ್ದೇವೆ ಎಂದು ಐಆರ್‌ಜಿಸಿ ಹೇಳಿದೆ.
'ಶತ್ರುವಿನ ಭರವಸೆಗಳಲ್ಲಿ ನಮಗೆ ಯಾವುದೇ ನಂಬಿಕೆಯಿಲ್ಲ. ಯಾವುದೇ ರೀತಿಯ ಅತಿಕ್ರಮಣಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸುವುದಾಗಿ ಅದು ಹೇಳಿದೆ.
ಪಶ್ಚಿಮ ಏಶ್ಯದಲ್ಲಿರುವ ಪ್ರಾದೇಶಿಕ ಪಾಲುದಾರರಿಗೆ ಅಮೆರಿಕ ಹಾಗೂ ಇಸ್ರೇಲ್‌ನ ಅಸಾಮಾರ್ಥ್ಯದ ದರ್ಶನವಾಗಿದ್ದು, ಆ ಎರಡು ದೇಶಗಳ ಜೊತೆ ಸಹಕಾರವನ್ನು ಕಡಿದುಕೊಳ್ಳಬೇಕೆಂದು ಐಆರ್‌ಜಿಸಿ ಹೇಳಿಕೆ ತಿಳಿಸಿದೆ.
ಇರಾನ್ ಒಗ್ಗಟ್ಟಾಗಿಯೇ ಉಳಿಯಲಿದೆ: ಮಸೂದ್ ಪೆಝೆಶ್ಕಿಯಾನ್
ಪಶ್ಚಿಮ ಏಶ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇಸ್ಲಾಮಾಬಾದ್ ನಡುವೆ ನಡೆಯುವ ಮಾತುಕತೆಗಳಲ್ಲಿ ಇರಾನ್ ಭಾಗವಹಿಸಲಿದೆಯೆಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಬುಧವಾರ ದೃಢಪಡಿಸಲಿದ್ದಾರೆ.
ಈ ಕದನವಿರಾಮವು ಇರಾನ್ ಒಪ್ಪಿಕೊಂಡಿರುವಂತಹ ಸಿದ್ದಾಂತಗಳನ್ನು ಆಧರಿಸಿದ್ದಾಗಿದೆ ಹಾಗೂ ಮುಂದೆಯೂ ದೇಶವು ಒಗ್ಗಟ್ಟಾಗಿಯೇ ಉಳಿಯಲಿದೆ ಎಂದು ಹೇಳಿದೆ.
''ಕದನವಿರಾಮವು ಇರಾನ್ ಸಾರ್ವತ್ರಿಕ ಸಿದ್ಧಾಂತಗಳ ಸ್ವೀಕಾರವಾಗಿದ್ದು, ನಮ್ಮ ಹುತಾತ್ಮ ನಾಯಕನ ಬಲಿದಾನ ಹಾಗೂ ಎಲ್ಲಾ ಜನತೆಯ ಭಾಗವಹಿಸುವಿಕೆಯ ಫಲವಾಗಿದೆ'' ಎಂದವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದಿನಿಂದ ನಾವು ರಾಜತಾಂತ್ರಿಕತೆ, ರಕ್ಷಣೆ, ರಸ್ತೆಗಳಲ್ಲಿ ಹಾಗೂ ಸೇವೆಗಳಲ್ಲಿ ಒಗ್ಗಟ್ಟಿನಿಂದಿರುವೆವು ಎಂದು ಇರಾನ್ ಅಧ್ಯಕ್ಷರ ಹೇಳಿಕೆ ತಿಳಿಸಿದೆ.
ಕದನವಿರಾಮಕ್ಕೆ ಬದ್ಧ: ಇಸ್ರೇಲ್
ಇರಾನ್‌ನ ಕ್ಷಿಪಣಿ ಉಡಾವಣಾ ಸ್ಥಳಗಳು ಹಾಗೂ ಮೂಲಸೌಕರ್ಯಗಳ ಮೇಲೆ ಮಂಗಳವಾರ ರಾತ್ರಿಯಿಡೀ ಕ್ಷಿಪಣಿ ದಾಳಿಗಳನ್ನು ನಡೆಸಿರುವ ಇಸ್ರೇಲ್ ಬುಧವಾರ ಇರಾನ್ ಜೊತೆ ಕದನವಿರಾಮ ಜಾರಿಯಲ್ಲಿರುವುದಾಗಿ ತಿಳಿಸಿದೆ. ಅಮೆರಿಕವು ಇರಾನ್ ಜೊತೆ ಏರ್ಪಡಿಸಿಕೊಂಡಿರುವ ಕದನವಿರಾಮಕ್ಕೆ ತಾನು ಬದ್ಧನಾಗಿರುವುದಾಗಿ ತಿಳಿಸಿದೆ.
ತನ್ನ ಫೈಟರ್ ಜೆಟ್‌ಗಳು ಇರಾನ್‌ನ ಡಝನ್‌ಗಟ್ಟಲೆ ಲಾಂಚರ್‌ಗಳನ್ನು ನಾಶಪಡಿಸುವ ಮೂಲಕ ಇಸ್ರೇಲ್ ವಿರುದ್ಧದ ನಡೆಯಲಿದ್ದ ಕ್ಷಿಪಣಿಗಳ ಬೃಹತ್ ಸಮೂಹ ದಾಳಿಯನ್ನು ತಡೆಗಟ್ಟಲಾಗಿದೆೆಯೆಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.

