ಹೊಸದಿಲ್ಲಿ,ಎ.8: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಮಾತುಕತೆಗಳಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿದ್ದು ಪ್ರಧಾನಿ ನರೇಂದ್ರಮೋದಿಯವರ ರಾಜತಾಂತ್ರಿಕತೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಬುಧವಾರ ಟೀಕಿಸಿದೆ.
ಮೋದಿಯವರ 'ಸ್ವಯಂ ಘೋಷಿತ' ವಿಶ್ವಗುರು ಚಿತ್ರಣ ಈಗ ಬಯಲಾಗಿದೆ.
ಅವರ 'ಸ್ವಯಂ ಘೋಷಿತ 56 ಇಂಚಿನ ಎದೆ' ಕುಗ್ಗಿಹೋಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ.
ಇರಾನ್ ಹೊರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವುದಕ್ಕೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರಾಚ್ಯದಲ್ಲಿ ಎರಡು ವಾರಗಳ ಕದನ ವಿರಾಮ ಘೋಷಿಸಿರುವ ಹಿನ್ನೆಲೆಯಲ್ಲಿ ರಮೇಶ್ ಹೇಳಿಕೆ ಹೊರಬಿದ್ದಿದೆ.
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಂತಹ ದೇಶಕ್ಕೆ ಕದನ ವಿರಾಮ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗಿರುವುದು ಮೋದಿಯವರ ಮಾತುಕತೆ ಮತ್ತು ನಿರೂಪಣೆ ನಿರ್ವಹಣೆಯ ಕಾರ್ಯತಂತ್ರವನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಕದನ ವಿರಾಮವನ್ನು ಸ್ವಾಗತಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಈ ಒಪ್ಪಂದವು ಪಶ್ಚಿಮ ಏಶ್ಯಾದಲ್ಲಿ ಶಾಶ್ವತ ಶಾಂತಿಯನ್ನು ತರುತ್ತದೆ ಎಂದು ತಾನು ಆಶಿಸಿರುವುದಾಗಿ ಹೇಳಿದೆ.
ಈ ಸಂಘರ್ಷವು ಈಗಾಗಲೇ ಜನರಿಗೆ ತೀವ್ರ ಸಂಕಷ್ಟಗಳನ್ನುಂಟು ಮಾಡಿದೆ ಮತ್ತು ಜಾಗತಿಕ ಇಂಧನ ಪೂರೈಕೆ ಹಾಗೂ ವ್ಯಾಪಾರ ಜಾಲಗಳಿಗೆ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿರುವ ಸಚಿವಾಲಯವು, 'ಹೊರ್ಮುಝ್ ಜಲಸಂಧಿಯ ಮೂಲಕ ಮುಕ್ತ ಸಂಚಾರ ಮತ್ತು ಜಾಗತಿಕ ವಾಣಿಜ್ಯ ಹರಿವು ಸುಗಮವಾಗಿ ನಡೆಯುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ ' ಎಂದು ತಿಳಿಸಿದೆ.
ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಇರಾನಿಗೆ ಎಚ್ಚರಿಕೆ ನೀಡಲು ಟ್ರಂಪ್ ಬಳಸಿದ್ದ ಭಾಷೆಯು 'ಅತ್ಯಂತ ಹೀನ'ವಾಗಿತ್ತು ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪಾಶ್ಚಾತ್ಯ ದೇಶಗಳ ನೈತಿಕತೆಯ ಮುಸುಕು ಹೇಗೆ ಕಳಚುತ್ತಿದೆ ಎನ್ನುವುದನ್ನು ಇಡೀ ಜಗತ್ತು ಗಮನಿಸುತ್ತಿದೆ ಮತ್ತು ಅರ್ಥ ಮಾಡಿಕೊಳ್ಳುತ್ತಿದೆ. ದ್ವೇಷ, ಕೋಪ, ಹಿಂಸೆ ಮತ್ತು ಅನ್ಯಾಯ ಎಂದಿಗೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಧೈರ್ಯ ಮತ್ತು ಬೆನ್ನುಮೂಳೆ ಎಂದರೇನು ಎನ್ನುವುದನ್ನು ಇರಾನ್ ಜಗತ್ತಿಗೆ ಕಲಿಸಿದೆ ಎಂದಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, ಭಾರತದ ನಾಯಕತ್ವವು ಬೆದರಿಸುವವರನ್ನು ದೃಢವಾಗಿ ಎದುರಿಸಬೇಕು ಎಂದು ಹೇಳಿದ್ದಾರೆ.
ಪಾಪ ವಿಶ್ವಗುರು:ಡಿಎಂಕೆ
ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಕುರಿತು ಕೇಂದ್ರವನ್ನು ವ್ಯಂಗ್ಯವಾಡಿರುವ ಡಿಎಂಕೆ ರಾಜ್ಯಸಭಾ ಸದಸ್ಯೆ ರತಿಜಿ'ಸಲ್ಮಾ'ಅವರು,'ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಯುದ್ಧವು ನಿಂತಿದೆ. ಪಾಪ ವಿಶ್ವಗುರು! ಸಂಘಿಗಳು ಇದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ?' ಎಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

