Dailyhunt
ಕಲಬುರಗಿ: ಖಾಲಿ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಆಯಂಬುಲೆನ್ಸ್ ಗೆ ಬೆಂಕಿ

ಕಲಬುರಗಿ: ಖಾಲಿ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಆಯಂಬುಲೆನ್ಸ್ ಗೆ ಬೆಂಕಿ

ಕಲಬುರಗಿ, ಮೇ 15: ಖಾಲಿ ಜಂಬೋ ಆಕ್ಸಿಜನ್ ಸಿಲಿಂಡರ್ ಹೊತ್ತೊಯುತ್ತಿದ್ದ ಆಯಂಬುಲೆನ್ಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶಹಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಗ್ರಾಮದ ಕಾಗಿಣಾ ಸೇತುವೆಯ ಬಳಿಯ ರಘುಜಿ ಕಾರ್ಖಾನೆಯ ಮುಂಭಾಗದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಚಿತ್ತಾಪುರ ಸರಕಾರಿ ಆಸ್ಪತ್ರೆಯ 108 ಆಯಂಬುಲೆನ್ಸ್ ಖಾಲಿ ಜಂಬೋ ಆಕ್ಸಿಜನ್ ಸಿಲಿಂಡರ್ ಹೊತ್ತು ಕಲಬುರಗಿ ನಗರಕ್ಕೆ ಹೊರಟಿತ್ತು. ಮಾರ್ಗ ಮದ್ಯೆ ಆಯಂಬುಲೆನ್ಸ್ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವಾಹನದಲ್ಲಿದ್ದ ಮೂವರು ಸಿಬ್ಬಂದಿ ಹಾಗೂ ಚಾಲಕ ವಾಹನದಿಂದ ಕೆಳಗೆ ಇಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಎಎಸ್‌ಐ ವೆಂಕಟೇಶ್ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಬಳಿಕ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಆಯಂಬುಲೆನ್ಸ್ ಮುಂಭಾಗ ಸಂಪೂರ್ಣ ಸುಟ್ಟು ಹೋಗಿದ್ದು. ಯಾವುದೇ ರೀತಿ ಜೀವ ಹಾನಿ ಉಂಟಾಗಿಲ್ಲ.

ಘಟನೆ ಸಂಬಂಧ ಶಹಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi