Dailyhunt Logo
  • Light mode
    Follow system
    Dark mode
    • Play Story
    • App Story
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರ ಪೀಠ | ಸಮಿತಿ ರಚಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ : ಐವನ್ ಡಿಸೋಜ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರ ಪೀಠ | ಸಮಿತಿ ರಚಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ : ಐವನ್ ಡಿಸೋಜ

ಮಂಗಳೂರು : ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್ ನ ಸಂಚಾರ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು ಬಕ್ರು ಭರವಸೆ ನೀಡಿದ್ದಾರೆ ಎಂದು ಹೈಕೋರ್ಟ್ ಕರಾವಳಿ ಸಂಚಾರ ಪೀಠ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಗೆ ರಾಜ್ಯ ಸರಕಾರ ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ವಿವಿಧ ಕಡೆಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು, ಜಿಲ್ಲೆಗಳ ನಡುವಿನ ಚರ್ಚೆಗಳು ಹಾಗೂ ಎದುರಾಗಿರುವ ಅಡೆತಡೆಗಳ ಕುರಿತು ಹೋರಾಟ ಸಮಿತಿಯ ನಿಯೋಗವು ಶುಕ್ರವಾರ ಬೆಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ವಿಚಾರ ವಿನಿಮಯ ನಡೆಸಿತು.

ರಾಜ್ಯ ಸರಕಾರ ಕೂಡ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸಂದರ್ಭ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಯೊಂದಿಗೆ ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಯ ವಿಚಾರವೂ ಪ್ರಮುಖವಾಗಿರಲಿದೆ ಎಂದು ಐವನ್ ಡಿಸೋಜ ತಿಳಿಸಿದರು.

ನಿಯೋಗದಲ್ಲಿ ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಶೇಣವ, ಉಡುಪಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ರೋನಾಲ್ಡ್ ಪ್ರವೀಣ್, ಮಂಗಳೂರು ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಜಿಲ್ಲಾ ಸರಕಾರಿ ವಕೀಲರು ಹಾಗೂ ಕರಾವಳಿ ಹೈಕೋಟ್ ಪೀಠ ಸಮಿತಿಯ ಪಿಆರ್‌ಒ ಎಂ.ಪಿ. ನೊರೋನ್ಹಾ ಮತ್ತಿತರರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi