ಉಡುಪಿ, ಎ.2: ಕರ್ನಾಟಕ ಸರಕಾರ 2021ರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾ ಯತ್ ಚುನಾವಣೆಗಳನ್ನು ನಡೆಸದಿರುವುದರಿಂದಲೇ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಯಂತೆ ರಾಜ್ಯ ಸರಕಾರಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ ರಾಜ್ಯದಲ್ಲಿ ಸಮರ್ಪಕ ಚುನಾಯಿತ ಸ್ಥಳೀಯಾಡಳಿತ ಸಂಸ್ಥೆಗಳು ಅಧಿಕಾರದಲ್ಲಿದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಕೇಂದ್ರದ ಪಂಚಾಯತ್‌ರಾಜ್ ರಾಜೀವ್ ರಂಜನ್ ಸಿಂಗ್ ಲೋಕಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2020-2021ರಿಂದ 2024-25ರ ಅವಧಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನದ ಎಲ್ಲಾ ಕಂತುಗಳನ್ನು ಕರ್ನಾಟಕದ ಅರ್ಹ ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆ ಮಾಡ ಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ಕೇಂದ್ರದಿಂದ ಬಿಡುಗಡೆ ಯಾದ ಹಣವನ್ನು ಪಂಚಾಯತ್‌ಗಳಿಗೆ ವಿಳಂಬವಾಗಿ ಹಾಗೂ ಅಪೂರ್ಣ ವಾಗಿ ವರ್ಗಾವಣೆ ಮಾಡಿರುವುದರಿಂದ ಮತ್ತು ವಿಳಂಬ ವರ್ಗಾವಣೆಗೆ ಸಂಬಂಧಿಸಿದ ದಂಡ ಬಡ್ಡಿಯನ್ನು ಬಿಡುಗಡೆ ಮಾಡದಿರುವುದರ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಸಚಿವರು ಸಂಸದ ಕೋಟ ಲಿಖಿತವಾಗಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
15ನೇ ಹಣಕಾಸಿನ ಆಯೋಗದ ಮಾರ್ಗಸೂಚಿ ಪ್ಯಾರಾ 5(ಎ)(11)ರಂತೆ ಚುನಾಯಿತ ನಗರ ಸ್ಥಳೀಯ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೆ ಮಾತ್ರ ಅನುದಾನವನ್ನು ಪಡೆಯುವ ಅರ್ಹತೆ ಹೊಂದಿರುತ್ತವೆ. ಆದರೆ ಕರ್ನಾಟಕ ರಾಜ್ಯದಲ್ಲಿ 2021ರ ಫೆಬ್ರವರಿ ತಿಂಗಳಿನಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಚುನಾಯಿತ ಆಡಳಿತ ಸದಸ್ಯರಿಲ್ಲ. ಆದ್ದರಿಂದ ಈ ಸಂಸ್ಥೆಗಳು 2025-26ನೇ ಸಾಲಿನ ಅನುದಾನವನ್ನು ಪಡೆಯಲು ಅನರ್ಹ ವಾಗಿವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
15ನೇ ಹಣಕಾಸು ಆಯೋಗದ ಮಾರ್ಗಸೂಚಿಯಂತೆ ಪ್ರತಿ ಹಣಕಾಸು ವರ್ಷದಲ್ಲಿ ಎರಡು ಕಂತುಗಳ ಮೂಲಕ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಹಾಗೆ ಬಿಡುಗಡೆ ಮಾಡಿದ ಕಂತುಗಳಿಗೆ ನಿಗದಿತ ನಮೂನೆ ಯಲ್ಲಿ ಅನುದಾನ ವರ್ಗಾವಣೆ ಪ್ರಮಾಣ ಪತ್ರ (ಗ್ರ್ಯಾಂಟ್ ಟ್ರಾನ್ಸಫರ್ ಸರ್ಟಿಫಿಕೇಟ್) ವನ್ನು ರಾಜ್ಯ ಸರಕಾರಗಳು ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಲಿಖಿತವಾಗಿ ತಿಳಿಸಿದ್ದಾರೆ.
ಕೇಂದ್ರ ಸರಕಾರ, ಕರ್ನಾಟಕ ರಾಜ್ಯ ಸರಕಾರಕ್ಕೆ 15ನೇ ಹಣಕಾಸು ಆಯೋಗದ ಹಣ ಪಾವತಿ ಮಾಡಿಲ್ಲವೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಂಸದ ಕೋಟ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಸಚಿವಾಲಯ ಲಿಖಿತ ಉತ್ತರ ನೀಡಿದೆ ಎಂದು ಕೋಟ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

