Dailyhunt Logo
  • Light mode
    Follow system
    Dark mode
    • Play Story
    • App Story
ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಆರೋಪ : ರಮೇಶ್ ಬಾಬು

ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಆರೋಪ : ರಮೇಶ್ ಬಾಬು

ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಉದ್ದೇಶ ಪೂರಕವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ, ವಿಧಾನ ಪರಿಷತ್ತಿನ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರ ನಿರ್ದೇಶನದ ಕಾರಣಕ್ಕಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೆಸರನ್ನು ಕೆಪಿಎಸ್ಸಿ ವಿಚಾರದಲ್ಲಿ ಎಳೆದು ತಂದು ಸಂಘ ಪರಿವಾರದ ಸಮರ್ಥನೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋಮಾಳ್ ಭೀಮಪ್ಪ ಮತ್ತು ಎಚ್.ಎನ್.ಕೃಷ್ಣ ಅವರ ಹಗರಣಗಳನ್ನು ಕರ್ನಾಟಕದ ಜನಸಾಮಾನ್ಯರು ಮರೆತಿಲ್ಲವೆಂಬುದನ್ನು ಕುಮಾರಸ್ವಾಮಿ ಅವರು ತಿಳಿಯಬೇಕು. ಇವರ ಅವಧಿಯ ನೇಮಕಾತಿ ಮತ್ತು ಅಕ್ರಮಗಳ ಆರೋಪಗಳ ಹಿಂದೆ ಯಾವ ಕೃಪಾಪೋಷಿತ ನಾಟಕ ಮಂಡಳಿ ಕೆಲಸ ಮಾಡಿತು ಎಂಬುದಕ್ಕೆ ಕುಮಾರಸ್ವಾಮಿ ಅವರೇ ಉತ್ತರಿಸಬೇಕು? ಕೆಪಿಎಸ್ಸಿ ಭ್ರಷ್ಟಾಚಾರದ ಜೊತೆಗೆ ಕಂಕಣ ಭಾಗ್ಯದ ಆಧಾರದ ಮೇಲೆ ನೇಮಕಾತಿಗಳು ನಡೆದಿರುವುದನ್ನು ಜನ ಮರೆತಿರುವುದಿಲ್ಲ ಎಂದು ಹೇಳಿದ್ದಾರೆ.

ಸಂದರ್ಭಕ್ಕೆ ತಕ್ಕಂತೆ ತಮ್ಮ ಹೇಳಿಕೆಗಳನ್ನು, ನಿಲುವುಗಳನ್ನು ಬದಲಿಸಿಕೊಳ್ಳುವ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಮಾಡಿರುವ ರಾಜಕೀಯ ಆರೋಪಗಳನ್ನು ಅವಕಾಶವಾದದ ಮುಂದುವರೆದ ಭಾಗ ಎಂದು ತಿಳಿಯಬೇಕಾಗುತ್ತದೆ. ರಾಜ್ಯದ ಹಲವಾರು ಯೋಜನೆಗಳು ಕೇಂದ್ರದ ಅನುಮತಿಗಾಗಿ ಬಾಕಿ ಇದ್ದು, ಒಬ್ಬ ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿ ರಾಜ್ಯದ ಹಿತಾಸಕ್ತಿಯ ಬಗ್ಗೆ ಧ್ವನಿ ಎತ್ತದೆ ಪದೇಪದೇ ರಾಜ್ಯದ ಮುಖ್ಯಮಂತ್ರಿಗಳ ಮೇಲೆ, ಗೃಹ ಸಚಿವರ ಮೇಲೆ, ಕಾಂಗ್ರೆಸ್ ಪಕ್ಷದ ಮೇಲೆ ಇಂತಹ ದ್ವೇಷ ರಾಜಕಾರಣದ ಆರೋಪಗಳನ್ನು ಕೈ ಬಿಟ್ಟು, ಕುಮಾರಸ್ವಾಮಿ ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ತಮ್ಮ ಬದ್ಧತೆಯನ್ನು ತೋರಿಸಲಿ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi