ಹೊಸದಿಲ್ಲಿ,ಜು.15: ಭಾರತದಲ್ಲಿ ಡ್ರೋನ್‌ಗಳ ಬಳಕೆಯನ್ನು ಸುಲಭವಾಗಿಸಲು ನಾಗರಿಕ ವಾಯುಯಾನ ಸಚಿವಾಲಯವು ಕರಡು ನಿಯಮಗಳನ್ನು ಬಿಡುಗಡೆಗೊಳಿಸಿದ್ದು,ಇವು ನಂಬಿಕೆ,ಸ್ವಯಂ ಪ್ರಮಾಣೀಕರಣ ಮತ್ತು ಅತಿಕ್ರಮಣವಾಗದಂತೆ ನಿಗಾಗಳನ್ನು ಆಧರಿಸಿವೆ ಎಂದು ಅಧಿಕೃತ ಹೇಳಿಕೆಯು ಗುರುವಾರ ತಿಳಿಸಿದೆ.
ಕರಡು ಡ್ರೋನ್ ನೀತಿಗಳು,2021ರಲ್ಲಿ ದೇಶದಲ್ಲಿ ಡ್ರೋನ್ ಕಾರ್ಯಾಚರಣೆಗಾಗಿ ತುಂಬಬೇಕಾದ ನಿಗದಿತ ನಮೂನೆಗಳ ಸಂಖ್ಯೆಯನ್ನು 25ಕ್ಕೆ ತಗ್ಗಿಸಲಾಗಿದೆ. ಹಿಂದಿನ ನಿಯಮಗಳಡಿ ಇದಕ್ಕಾಗಿ 25 ನಮೂನೆಗಳನ್ನು ತುಂಬಬೇಕಿತ್ತು. ಶುಲ್ಕವನ್ನು ಸಾಂಕೇತಿಕ ಮಟ್ಟಕ್ಕೆ ಇಳಿಸಲಾಗಿದ್ದು, ಶುಲ್ಕಕ್ಕೂ ಡ್ರೋನ್ ಗಾತ್ರಕ್ಕೂ ಇದ್ದ ನಂಟನ್ನು ತೆಗೆದುಹಾಕಲಾಗಿದೆ.
ಅನುಸರಣೆ ಮತ್ತು ನಿರ್ವಹಣೆ ಪ್ರಮಾಣಪತ್ರಗಳು,ಆಮದು ಪರವಾನಿಗೆ,ನಿರ್ವಾಹಕ ಪರವಾನಿಗೆ ಸೇರಿದಂತೆ ವಿವಿಧ ಅನುಮತಿಗಳ ಅಗತ್ಯವನ್ನೂ ಕರಡು ನಿಯಮಗಳಲ್ಲಿ ಕೈಬಿಡಲಾಗಿದೆ.
ಹಸಿರು ವಲಯಗಳಲ್ಲಿ 400 ಅಡಿ ಮತ್ತು ವಿಮಾನ ನಿಲ್ದಾಣದ ಪರಿಧಿಯಿಂದ 8ರಿಂದ 12ಕಿ.ಮೀ.ನಡುವೆ 200 ಅಡಿ ಎತ್ತರದವರೆಗೆ ಯಾವುದೇ ಹಾರಾಟ ಅನುಮತಿ ಅಗತ್ಯವಿಲ್ಲ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ.
ಡ್ರೋನ್‌ಗಳ ವರ್ಗಾವಣೆ ಮತ್ತು ನೋಂದಣಿ ರದ್ದತಿ ಪ್ರಕ್ರಿಯೆಗಳನ್ನೂ ಸುಲಭಗೊಳಿಸಲಾಗಿದೆ.
ಮೈಕ್ರೋ ಡ್ರೋನ್ ಗಳು (ವಾಣಿಜ್ಯೇತರ ಬಳಕೆಗಾಗಿ),ನ್ಯಾನೋ ಡ್ರೋನ್‌ಗಳಿಗೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಪೈಲಟ್ ಪರವಾನಿಗೆ ಅಗತ್ಯವಿಲ್ಲ ಎಂದು ಈ ಕರಡು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಸರಕುಗಳ ಪೂರೈಕೆಗಾಗಿ ಡ್ರೋನ್ ಕಾರಿಡಾರ್‌ಗಳನ್ನು ಅಭಿವೃದ್ಧಿಗೊಳಿಸಲಾಗುವುದು ಮತ್ತು ದೇಶದಲ್ಲಿ ಡ್ರೋನ್ ಸ್ನೇಹಿ ನಿಯಂತ್ರಣ ವ್ಯವಸ್ಥೆಗಾಗಿ ಡ್ರೋನ್ ಪ್ರೋತ್ಸಾಹನ ಮಂಡಳಿಯೊಂದನ್ನು ಸ್ಥಾಪಿಸಲಾಗುವುದು. ಕರಡು ನಿಯಮಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಆ.5 ಕೊನೆಯ ದಿನಾಂಕವಾಗಿದೆ.
ಭಾರತದಲ್ಲಿ ನೋಂದಣಿಯಾಗಿರುವ ವಿದೇಶಿ ಸ್ವಾಮ್ಯದ ಕಂಪನಿಗಳಿಂದ ಡೋನ್ ಕಾರ್ಯಾಚರಣೆಗಳ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ.

