Dailyhunt
ಕೆಪಿಸಿಎಲ್‍ನಲ್ಲಿ 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ : ಗೌರವ್ ಗುಪ್ತ

ಕೆಪಿಸಿಎಲ್‍ನಲ್ಲಿ 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ : ಗೌರವ್ ಗುಪ್ತ

ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ದಲ್ಲಿ ಭರ್ತಿ ಮಾಡಲಾಗುತ್ತಿರುವ 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಕೌನ್ಸ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ತಿಳಿಸಿದ್ದಾರೆ.

ಗುರುವಾರ ನಡೆದ ಕೌನ್ಸಿಲಿಂಗ್ ನಲ್ಲಿ ಆಯ್ಕೆಯಾದ 20 ಸಹಾಯಕ ಇಂಜಿನಿಯರ್ (ಸಿವಿಲ್), 38 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 20 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್), 27 ಸಹಾಯಕ ಇಂಜಿನಿಯರ್ (ಇನ್ ಸ್ಟ್ರುಮೆಂಟೇಷನ್), 13 ಕಿರಿಯ ಎಂಜಿನಿಯರ್ (ಸಿವಿಲ್), 61 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 41 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್), 2 ಕೆಮಿಸ್ಟ್ ಹಾಗೂ 11 ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಉಳಿದ ಹುದ್ದೆಗಳಿಗೆ ದಾಖಲೆಗಳ ನೈಜತೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಬಳಿಕ ನೇಮಕಾತಿ ಆದೇಶ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ, ಇಂಧನ ಸಚಿವರ ಸಹಕಾರದಿಂದ ಕೆಪಿಸಿಎಲ್‍ನಲ್ಲಿ ಈ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

233 ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ. ನಿಗಮಕ್ಕೆ ನೇಮಕಗೊಂಡಿರುವ ಯುವ ಇಂಜಿನಿಯರ್ ಗಳು ತಮ್ಮ ಕೌಶಲ್ಯದಿಂದ ಕೆಪಿಸಿಎಲ್‍ನ ಪ್ರತಿಷ್ಟೇ ಹೆಚ್ಚಿಸಬೇಕು. ನೀವು ಬಂದಿರುವುದರಿಂದ ನಿಗಮದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಎಂದು ಅವರು ಕರೆ ನೀಡಿದರು.

ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ವಿದ್ಯುತ್ ಉತ್ಪಾದನೆಯಲ್ಲಿ ನಿಗಮನನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯವ ಪ್ರಯತ್ನ ನಿಮ್ಮಿಂದ ಆಗಬೇಕು. ಹೊಸದಾಗಿ ನೇಮಕಗೊಂಡಿರುವವರಿಗೆ ಉನ್ನತ ಹುದ್ದೆಗೇರಲು ಸಾಕಷ್ಟು ಅವಕಾಶಗಳಿದ್ದು, ನಿಗಮದಿಂದ ನೀವೇನು ಪಡೆದಿದ್ದೀರಿ ಎಂಬುದಕ್ಕಿಂತ ನಿಗಮಕ್ಕೆ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು ಎಂದು ಗೌರವ್ ಗುಪ್ತ ಸಲಹೆ ಮಾಡಿದರು.

ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ನಿರ್ದೇಶಕಿ ರೇಖಾ ಟಿ., ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಡಾ.ಆಶಾ ಎಸ್. ಮತ್ತಿತರರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi