Wednesday, 21 Apr, 12.09 am ವಾರ್ತಾಭಾರತಿ

ರಾಷ್ಟೀಯ
ಕೇವಲ 7-12 ಗಂಟೆಗಳಲ್ಲಿ ಆಮ್ಲಜನಕ ದಾಸ್ತಾನು ಮುಗಿಯಲಿದೆ: ದಿಲ್ಲಿ ಆಸ್ಪತ್ರೆಗಳು

ಹೊಸದಿಲ್ಲಿ, ಎ. 19: ನಮ್ಮ ಆಮ್ಲಜನಕದ ದಾಸ್ತಾನು ಕೇವಲ 7ರಿಂದ 12 ಗಂಟೆಗಳ ಒಳಗೆ ಮುಗಿಯಲಿದೆ. ಒಂದು ವೇಳೆ ಆಮ್ಲಜನಕ ಸಿಗದೇ ಇದ್ದರೆ ಜನರು ಸಾವನ್ನಪ್ಪಲಿದ್ದಾರೆ ಎಂದು ದಿಲ್ಲಿಯ ಹಲವು ಆಸ್ಪತ್ರೆಗಳು ಹೇಳಿವೆ.

''ದಿಲ್ಲಿಯಲ್ಲಿ ಆಮ್ಲಜನಕ ಗಂಭೀರ ಬಿಕ್ಕಟ್ಟು ಮುಂದುವರಿದಿದೆ. ದಿಲ್ಲಿಗೆ ತುರ್ತಾಗಿ ಆಮ್ಲಜನಕ ಪೂರೈಸುವಂತೆ ನಾನು ಮತ್ತೊಮ್ಮೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದೇನೆ. ಕೆಲವು ಆಸ್ಪತ್ರೆಗಳಲ್ಲಿ ಕೇವಲ ಕೆಲವು ಗಂಟೆಗಳ ಕಾಲ ಬಳಸುವಷ್ಟು ಮಾತ್ರ ಆಮ್ಲಜನಕ ಇದೆ'' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ನಮಗೆ ಆಮ್ಲಜನಕದ ತುಂಬಾ ಅಗತ್ಯ ಇದೆ. ಇರುವ ಆಮ್ಲಜನಕ 7ರಿಂದ 8 ಗಂಟೆಗಳ ಒಳಗೆ ಮುಗಿಯುವ ಸಾಧ್ಯತೆ ಇದೆ ಎಂದು ಸರ್ ಗಂಗಾರಾಮ್ ಖಾಸಗಿ ಆಸ್ಪತ್ರೆಯ ಅಧ್ಯಕ್ಷ ಡಾ. ಡಿ.ಎಸ್. ರಾಣಾ ಹೇಳಿದ್ದಾರೆ.

''ಒಂದು ವೇಳೆ ನಮಗೆ ಆಮ್ಲಜನಕ ಸಿಗದೇ ಇದ್ದರೆ ಹಲವರು ಸಾವನ್ನಪ್ಪಬಹುದು. ಐಸಿಯುನಲ್ಲಿರುವ 120 ರೋಗಿಗಳು ಆಮ್ಲಜನಕವನ್ನು ಅವಲಂಬಿಸಿದ್ದಾರೆ. ಇತರ ಶೇ. 80 ರೋಗಿಗಳು ಕೂಡ ಆಮ್ಲಜಕನವನ್ನು ಅವಲಂಬಿಸಿದ್ದಾರೆ. ನಾವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮಾಹಿತಿ ನೀಡಿದ್ದೇವೆ'' ಎಂದು ಡಾ. ರಾಣಾ ಹೇಳಿದ್ದಾರೆ.

ಇದು ಹೆಚ್ಚಿನ ಎಲ್ಲ ಆಸ್ಪತ್ರೆಗಳ ಪರಿಸ್ಥಿತಿ ಎಂದು ಖಾಸಗಿ ಆಸ್ಪತ್ರೆ ಆಕಾಶ್ ಹೆಲ್ತ್ಕೇರ್ನ ವೈದ್ಯಕೀಯ ಅಧೀಕ್ಷಕ ಜ್ಯೋತಿ ಮಿಶ್ರಾ ಅವರು ಹೇಳಿದ್ದಾರೆ.

ನಮ್ಮಲ್ಲಿ 12 ಗಂಟೆಗಿಂತ ಹೆಚ್ಚು ಕಾಲ ಬಳಸಲು ಆಮ್ಲಜನಕ ದಾಸ್ತಾನು ಇಲ್ಲ. ಐಸಿಯುನಲ್ಲಿ 45 ಮಂದಿ ಆಮ್ಲಜನಕವನ್ನು ಅವಲಂಬಿಸಿದ್ದಾರೆ. ನಾವು ದಿನಂಪ್ರತಿ ಆಮ್ಲಜನಕ ದಾಸ್ತಾನು ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡುತ್ತಿದ್ದೇವೆ. ಈಗ ಪೂರೈಕೆ ಕಡಿಮೆ ಇದೆ ಎಂದು ಡಾ. ಮಿಶ್ರಾ ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top