
ಸಾಂದರ್ಭಿಕ ಚಿತ್ರ | PC : AI
ಮಡಿಕೇರಿ : ಕೊಡಗಿನಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕಾಯಿಮಾನಿ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ಮೃತರನ್ನು ಕಾಯಿಮಾನಿ ನಿವಾಸಿ ಮೂಕಳಮಾಡ ರತ್ತು (54) ಎಂದು ಗುರುತಿಸಲಾಗಿದೆ.
ರತ್ತು ಅವರು ಕಾಯಿಮಾನಿ-ಕುರ್ಚಿ ಗ್ರಾಮಗಳ ನಡುವೆ ಇರುವ ತಮ್ಮ ಕಾಫಿ ತೋಟಕ್ಕೆ ಎಂದಿನಂತೆ ತೆರಳುತ್ತಿದ್ದರು. ಈ ಸಂದರ್ಭ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿ ತುಳಿದಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡ ರತ್ತು ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ವಿಭಾಗದಲ್ಲಿ 8 ರಿಂದ 10 ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರೂವರೆ ತಿಂಗಳಿನಲ್ಲಿ ಕಾಡಾನೆಯಿಂದ 6 ಸಾವುಗಳು ಸಂಭವಿಸಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
