Dailyhunt Logo
  • Light mode
    Follow system
    Dark mode
    • Play Story
    • App Story

ಕೊಡಲಿಯಿಂದ ಹೊಡೆದು ಪತಿ ಕೊಲೆ: ಪತ್ನಿಗೆ ಜೀವಾವಧಿ‌ ಶಿಕ್ಷೆ, ದಂಡ

ಸಾಂದರ್ಭಿಕ ಚಿತ್ರ photo: magnific

ದಾವಣಗೆರೆ: ಸಂಸಾರಿಕ ವಿಚಾರವಾಗಿ ಪದೇಪದೇ ಜಗಳವಾಡುತ್ತಿದ್ದ ಪತ್ನಿಯೊಬ್ಬಳು, ನಿದ್ದೆಯಲ್ಲಿದ್ದ ಪತಿಯ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 50,000 ರೂ.

ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

​ಚನ್ನಗಿರಿ ತಾಲ್ಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಶಿಕ್ಷೆಗೆ ಗುರಿಯಾದ ಅಪರಾಧಿ. ಮೃತ ಶಾಂತಕುಮಾರ್ ಕೊಲೆಗೀಡಾದ ವ್ಯಕ್ತಿ.

ಜಗಳೂರು ತಾಲ್ಲೂಕಿನ ಕೆಳಗೋಟೆ ಗ್ರಾಮದ ರೇಖಾ ಹಾಗೂ ಶಾಂತಕುಮಾರ್ ಅವರ ಮದುವೆ 16 ವರ್ಷಗಳ ಹಿಂದೆ ನಡೆದಿತ್ತು. ದಂಪತಿ ಅನ್ಯೋನ್ಯವಾಗಿದ್ದರೂ, ಆಗಾಗ್ಗೆ ಸಂಸಾರದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಸಂಬಂಧಿಕರು ಎಷ್ಟೇ ಬುದ್ಧಿವಾದ ಹೇಳಿದರೂ ರೇಖಾಳ ಜಗಳ ಮಾತ್ರ ನಿಂತಿರಲಿಲ್ಲ.

​ದಿನಾಂಕ 21/03/2023 ರ ರಾತ್ರಿ ಶಾಂತಕುಮಾರ್ ಮಲಗಿದ್ದ ವೇಳೆ, ಕೊಲೆ ಮಾಡುವ ಉದ್ದೇಶದಿಂದ ರೇಖಾಳು ಕೊಡಲಿಯಿಂದ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಳು. ರಕ್ತದ ಮಡುವಿನಲ್ಲಿದ್ದ ಶಾಂತಕುಮಾರನನ್ನು ಸಂತೆಬೆನ್ನೂರು ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರು ತಿಂಗಳ ಬಳಿಕ ಅಂದರೆ ಆಗಸ್ಟ್ 25, 2023 ರಂದು ಶಾಂತಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

​ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದಡಿ ದಾಖಲಾಗಿದ್ದ ಪ್ರಕರಣವು, ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಬದಲಾವಣೆಗೊಂಡಿತ್ತು.

​ಪ್ರಕರಣದ ತನಿಖೆ ಕೈಗೊಂಡ ಸಂತೆಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಆರ್. ಪಡಸಲಗಿ ಅವರು ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಕ್ಟೋಬರ್ 19, 2026 ರಂದು ಈ ತೀರ್ಪು ಪ್ರಕಟಿಸಿದ್ದಾರೆ.

​ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಜಯ್ಯಪ್ಪ ಕೆ. ವಾದ ಮಂಡಿಸಿದ್ದರು. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ, ಸಿಬ್ಬಂದಿ ಹಾಗೂ ವಕೀಲರ ಸೇವೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶೇಖರ್ ಹೆಚ್.ಟಿ. ಶ್ಲಾಘಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi