Dailyhunt

ಕೊರೋನ ಲಸಿಕೆ ವಿಚಾರ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಶಿವಮೊಗ್ಗ, ಜು.6: ಕೊರೋನ ಲಸಿಕೆ ನೀಡುವ ವಿಚಾರವಾಗಿ ನಡೆದ ಮಾತಿನ ಚಕಮಕಿ ಹಿಂಸೆಗೆ ತಿರುಗಿದ್ದು, ಪರಸ್ಪರ ಕೈಕೈ ಮಿಲಾಯಿಸಿಕೊಂಡ ಘಟನೆ ತೀರ್ಥಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೋಮವಾರ ತಡ ರಾತ್ರಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯ,ಕಾಂಗ್ರೆಸ್ ಮುಖಂಡ ನಮೃತ್ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸುಭಾಷ್ ಕುನಾಲ್ ಹಾಗೂ ಬಿಜೆಪಿ ಕಾರ್ಯಕರ್ತರಾದ ವಿಶ್ವನಾಥ್ ಗಾಣಿಗ, ಯಶಸ್ವಿ ಕಡ್ತೂರ್, ಸುಮಂತ್ ಎಂಬುವವರು ಗಲಾಟೆಯಲ್ಲಿ ಗಾಯಗೊಂಡು ತೀರ್ಥಹಳ್ಳಿಯ ಸರ್ಕಾರಿ ಜೆ.ಸಿ ಆಸ್ಪತ್ರಗೆ ದಾಖಲಾಗಿದ್ದಾರೆ.

ತೀರ್ಥಹಳ್ಳಿಯ ಸೀಬಿನಕೆರೆ ಶಾಲೆಯ ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕುವ ಸಂಬಂಧ ಪರಸ್ಪರ ಮಾತಿನ ಚಕಮಕಿ ನಡೆದಿದೆ.ಬಳಿಕ ಘರ್ಷಣೆಗೆ ತಿರುಗಿದ್ದು, ವಿಶ್ವನಾಥ್ ಗಾಣಿಗ ಮತ್ತು ನಮೃತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಘಟನೆ ಬಳಿಕ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಮತ್ತೆ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತ ಸುಭಾಷ್ ಕುಲಾಲ್,ಬಿಜೆಪಿ ಕಾರ್ಯಕರ್ತರಾದ ಯಶಸ್ವಿ ಕಡ್ತೂರ್ ಗಾಯಗೊಂಡಿದ್ದಾರೆ.ಬಳಿಕ ಎರಡು ಪಕ್ಷಗಳ ನಾಯಕರು ಆಸ್ಪತ್ರೆ ಮುಂದೆ ಜಮಾವಣೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಬಳಿಕ ಶಾಸಕ ಅರಗ ಜ್ಣಾನೇಂದ್ರ ಆಗಮಿಸಿ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಚೌಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಮಧ್ಯಪ್ರವೇಶಿಸಿದ ಡಿವೈಎಸ್‌ಪಿ ಶಾಂತವೀರಪ್ಪ,ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಈ ಪ್ರತಿಭಟನೆ ಮುಗಿಯುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ,ಸಂದೇಶ ಜವಳಿ,ಕಾಸರವಳ್ಳಿ ಶ್ರೀನಿವಾಸ್,ಹೆದ್ದೂರು ನವೀನ್,ಸೊಪ್ಪುಗಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸಿ,ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆಯಲ್ಲಿ ಯಾರದು ತಪ್ಪು,ಯಾರದು ಸರಿ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi