Dailyhunt
ಕೊರೋನ ಸೋಂಕಿನಿಂದ ದಂಪತಿ ಮೃತ್ಯು: 5 ದಿನದ ಮಗು ಅನಾಥ

ಕೊರೋನ ಸೋಂಕಿನಿಂದ ದಂಪತಿ ಮೃತ್ಯು: 5 ದಿನದ ಮಗು ಅನಾಥ

ಸಾಂದರ್ಭಿಕ ಚಿತ್ರ

ಮಂಡ್ಯ, ಮೇ15: ತಂದೆ- ತಾಯಿ ಕೊರೋನ ಸೋಂಕಿಗೆ ಬಲಿಯಾಗಿ ಐದು ದಿನದ ಹಸುಗೂಸು ಅನಾಥವಾಗಿರುವ ಘಟನೆ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಮಗುವಿನ ತಂದೆ ನಂಜುಂಡೇಗೌಡ (45) 15 ದಿನಗಳ ಹಿಂದೆ ಕೊರೋನಗೆ ಬಲಿಯಾಗಿದ್ದರು. ತಾಯಿ ಮಮತಾ (31) ಮಗುವಿಗೆ ಜನ್ಮ ನೀಡಿ ಐದೇ ದಿನಗಳಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.

ನಂಜುಂಡೇಗೌಡರು ಫೈನಾನ್ಸ್ ಮಾಡಿಕೊಂಡಿದ್ದರು. ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ಕೊರೋನ ಸೋಂಕಿಗೆ ಒಳಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಎ.30 ರಂದು ಸಾವನ್ನಪ್ಪಿದ್ದಾರೆ.

ನಂತರ, ತುಂಬು ಗರ್ಭಿಣಿಯಾಗಿದ್ದ ಮಮತಾಗೂ ಕೊರೋನ ಸೋಂಕು ತಗಲಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಈ ನಡುವೆ ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿ, ನಿನ್ನೆ(ಶುಕ್ರವಾರ) ಸಂಜೆ ಮೃತಪಟ್ಟಿದ್ದಾರೆ. ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ 5 ದಿನಗಳ ಮಗು ಈಗ ಅನಾಥವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi