Dailyhunt
ಕೋವಿಡ್ ಲಸಿಕೆ ವ್ಯರ್ಥ: ಕೇಂದ್ರದ ವರದಿ ತಿರಸ್ಕರಿಸಿದ ಮಧ್ಯಪ್ರದೇಶ ಬಿಜೆಪಿ ಸರಕಾರ!

ಕೋವಿಡ್ ಲಸಿಕೆ ವ್ಯರ್ಥ: ಕೇಂದ್ರದ ವರದಿ ತಿರಸ್ಕರಿಸಿದ ಮಧ್ಯಪ್ರದೇಶ ಬಿಜೆಪಿ ಸರಕಾರ!

ಸಾಂದರ್ಭಿಕ ಚಿತ್ರ (source: PTI)

ಭೋಪಾಲ್, ಮೇ 28: ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಲಸಿಕೆಗಳು ವ್ಯರ್ಥವಾಗಿವೆ ಎಂದು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳನ್ನು ವಿರೋಧ ಪಕ್ಷಗಳ ಸರ್ಕಾರವಿರುವ ಛತ್ತೀಸ್‌ಗಢ ಮತ್ತು ಜಾರ್ಖಂಡ್ ಮಾತ್ರವಲ್ಲದೇ ಬಿಜೆಪಿಯ ಮಧ್ಯಪ್ರದೇಶ ಸರಕಾರ ಕೂಡಾ ಅಲ್ಲಗಳೆದಿದೆ.

ಕೇಂದ್ರ ಸರಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಾರ್ಖಂಡ್‌ನಲ್ಲಿ ಶೇಕಡ 37.3ರಷ್ಟು ಲಸಿಕೆ ವ್ಯರ್ಥವಾಗಿದ್ದರೆ, ಛತ್ತೀಸ್‌ಗಢದಲ್ಲಿ 30.2% ಲಸಿಕೆ ವ್ಯರ್ಥವಾಗಿದೆ. ಉಳಿದಂತೆ ತಮಿಳುನಾಡು (15.5%), ಜಮ್ಮು ಮತ್ತು ಕಾಶ್ಮೀರ (10.8%), ಮಧ್ಯಪ್ರದೇಶ (10.7) ನಂತರದ ಸ್ಥಾನದಲ್ಲಿವೆ. ದೇಶದಲ್ಲಿ ಸರಾಸರಿ ಲಸಿಕೆ ವ್ಯರ್ಥವಾಗಿರುವ ಪ್ರಮಾಣ ಶೇಕಡ 6.3ರಷ್ಟು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಅಂಶ ಚರ್ಚೆಗೆ ಒಳಗಾಗಿತ್ತು.

ಮರುದಿನವೇ ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ವಿಶ್ವಾಸ್ ಸಾರಂಗ್ ಕೇಂದ್ರದ ವರದಿಯ ಅಂಕಿಅಂಶಗಳನ್ನು ಅಲ್ಲಗಳೆದಿದ್ದಾರೆ.

"ನನ್ನ ತಿಳಿವಳಿಕೆ ಪ್ರಕಾರ ಮಧ್ಯಪ್ರದೇಶದಲ್ಲಿ ಲಸಿಕೆ ವ್ಯರ್ಥವಾಗಿರುವ ಪ್ರಮಾಣ 1.3%. ಕೇಂದ್ರ ಸರ್ಕಾರದ ಅಂಕಿಅಂಶಗಳಲ್ಲಿ ಅಧಿಕ ಪ್ರಮಾಣವನ್ನು ತೋರಿಸಲಾಗಿದೆ. ನಮ್ಮಲ್ಲಿನ ವಾಸ್ತವ ಅಂಕಿಅಂಶಗಳು ಕೇಂದ್ರಕ್ಕೆ ತಲುಪಿರದೇ ಇರುವ ಸಾಧ್ಯತೆ ಇದೆ. ಈ ಅಂಕಿಅಂಶಗಳನ್ನು ಸರಿಪಡಿಸುವ ಸಂಬಂಧ ಕೇಂದ್ರ ಸರ್ಕಾರಿ ಅಧಿಕಾರಿಗಳ ಜತೆ ಚರ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಸಾರಂಗ ಹೇಳಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi