Dailyhunt
'ಕೋವಿಡ್ ಸಂಕಷ್ಟ ಪರಿಸ್ಥಿತಿ' ಕಾಂಗ್ರೆಸ್ ಕೇರ್ಸ್‍ನಿಂದ ಆರೋಗ್ಯ ಸೇವೆ: ಡಿ.ಕೆ.ಶಿವಕುಮಾರ್

'ಕೋವಿಡ್ ಸಂಕಷ್ಟ ಪರಿಸ್ಥಿತಿ' ಕಾಂಗ್ರೆಸ್ ಕೇರ್ಸ್‍ನಿಂದ ಆರೋಗ್ಯ ಸೇವೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 1: ಕೋವಿಡ್ ಸಾಂಕ್ರಾಮಿಕದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಯ ನೆರವು ನೀಡಲು ಕಾಂಗ್ರೆಸ್ ಕೇರ್ಸ್ ವತಿಯಿಂದ ರಾಜಧಾನಿ ಬೆಂಗಳೂರಿಗೆ 10 ಆಂಬ್ಯುಲೆನ್ಸ್ ಗಳು, ಸಹಾಯವಾಣಿ, ಕೋವಿಡ್ ವಾರ್ ರೂಂ ಪ್ರಾರಂಭ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಮುಖಂಡರ ಜೊತೆ ಕಾಂಗ್ರೆಸ್ ಕೇರ್ಸ್ ಆಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಕ್ಕೆ ಹೊಸ ರೂಪ ನೀಡಲು ಕಾಂಗ್ರೆಸ್ ಸೋಷಿಯಲ್ ಮೀಡಿಯಾಗೆ ವಾರಿಯರ್ ಗಳನ್ನು ಬೂತ್ ಮಟ್ಟದಲ್ಲಿ ನೇಮಕ ಮಾಡುತ್ತಿದ್ದೇವೆ.

ರಾಜ್ಯದ ಪ್ರತಿಯೊಂದು ಊರು, ಹಳ್ಳಿಗಳಲ್ಲಿನ ಜನರ ನೋವುಗಳಿಗೆ ಸ್ಪಂದಿಸಬೇಕು. ಮಾಧ್ಯಮ ಹಾಗೂ ಸರಕಾರಕ್ಕೆ ಅನೇಕ ವಿಚಾರಗಳನ್ನು ತಿಳಿಸಬೇಕೆಂಬ ಉದ್ದೇಶದಿಂದ ಮೇ 1 ಕಾರ್ಮಿಕ ದಿನದ ಅಂಗವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಾರಿಯರ್ ಗಳಾಗಲು ವಿದ್ಯಾರ್ಥಿಗಳು, ಯುವಕರು, ಸಮಾಜದ ಬಗ್ಗೆ ಕಳಕಳಿ ಇರುವವರು ಈ ಸಂಖ್ಯೆ 1800 1200 0004ಗೆ ಮಿಸ್‍ಕಾಲ್, ಅಥವಾ ವಾಟ್ಸಪ್ ಸಂಖ್ಯೆ 75740 00525ಗೆ ಸಂದೇಶ ಕಳುಹಿಸಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಶಿವಕುಮಾರ್ ಹೇಳಿದರು.

ಛತ್ತೀಸ್‍ಗಡ ಹಾಗೂ ರಾಜಸ್ಥಾನ ಸರಕಾರಗಳು ಆರ್ಡರ್ ಮಾಡಿರುವ ರೆಮ್‍ಡಿಸಿವರ್ ಔಷಧಿಗಳು ಬ್ಲಾಕ್ ಮಾಡಲಾಗಿದೆ. ಆದರೆ, ಬಿಜೆಪಿ ನಾಯಕರಿಗೆ ಡಬ್ಬದಲ್ಲಿ ತುಂಬಿ ಔಷಧಿಗಳನ್ನು ನೀಡಲಾಗುತ್ತಿದೆ. ಈ ರೀತಿ ಔಷಧಿಗಳನ್ನು ಕೊಂಡೊಯ್ಯಲು ಡ್ರಗ್ ಕಂಟೋಲರ್ ಅವರಿಂದ ಪರವಾನಿಗೆ ಇದೆಯೇ ?. ಮುಖ್ಯಮಂತ್ರಿ, ಪ್ರಧಾನಿ ಈ ಬಗ್ಗೆ ಗಮನ ಹರಿಸಬೇಕು. ಕೇಂದ್ರ ಆರೋಗ್ಯ ಸಚಿವರು ಇದಕ್ಕೆ ಉತ್ತರಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ನಮ್ಮ ಆಸ್ಪತ್ರೆಗಳು ಔಷಧಿ ದಾಸ್ತಾನಿಗೆ ಕೇಳಿದರೆ ಪರವಾನಿಗೆ ಕೇಳುತ್ತಾರೆ. ಆದರೆ, ಬಿಜೆಪಿ ಶಾಸಕರು, ಸಂಸದರು ಔಷಧಿಗಳನ್ನು ತೆಗೆದು ಕೊಂಡು ಹೋಗಬಹುದು. ರಾಜ್ಯದಲ್ಲಿ ಏನಾಗುತ್ತಿದೆ. ಬಿಜೆಪಿ ಸಂಸದನಿಗೆ ಔಷಧಿ ತೆಗೆದುಕೊಂಡು ಹೋಗಲು ಅವಕಾಶ ಕೊಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಔಷಧಿ ನಿಮ್ಮ ಮನೆ ಆಸ್ತಿ ಅಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಆನ್‍ಲೈನ್‍ನಲ್ಲಿ ಯಾಕೆ ನೋಂದಣಿ ಮಾಡಬೇಕು. ಹಳ್ಳಿ ಜನರು ಹೇಗೆ ಇದನ್ನು ಮಾಡಲು ಸಾಧ್ಯ. ಪೋಲಿಯೊ ಮಾದರಿಯಲ್ಲಿ ಮನೆ ಮನೆಗೆ ಹೋಗಿ ಲಸಿಕೆ ನೀಡಲಿ ಎಂದು ಶಿವಕುಮಾರ್ ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್-19 ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅನಿಸುತ್ತಿಲ್ಲ. ಕೋವಿಡ್ ಅನ್ನು ಪ್ರಾಮಾಣಿಕವಾಗಿ ತಡೆಗಟ್ಟಲು ಪ್ರಯತ್ನ ಮಾಡಿದ್ದರೇ, ಈ ಪರಿಸ್ಥಿತಿ ದೇಶ ಹಾಗೂ ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿರಲಿಲ್ಲ. ಮೇ 1 ರಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿಕೆ ನೀಡಿದ್ದರು. ನಮ್ಮ ರಾಜ್ಯದಲ್ಲಿ ಈ ವಯೋಮಾನದ 3 ಕೋಟಿ ಜನ ಇದ್ದಾರೆ. ಇಲ್ಲಿ ಯಾವುದೆ ಸಿದ್ಧತೆಗಳನ್ನೆ ಮಾಡಿಕೊಂಡಿಲ್ಲ. ಈ ರೀತಿ ಪ್ರಧಾನಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದರು.

18-44 ವರ್ಷದವರಿಗೆ ಲಸಿಕೆ ನೀಡಲು ನಮ್ಮ ರಾಜ್ಯಕ್ಕೆ ಸುಮಾರು 6.50 ಕೋಟಿ ಲಸಿಕೆ ಬೇಕು. ಒಂದು ಲಸಿಕೆಗೆ 300 ರೂ.ಗಳಿದ್ದರೆ ಸುಮಾರು 2000 ಕೋಟಿ ರೂ.ಬೇಕಾಗುತ್ತದೆ. ಆದರೆ, ಸರಕಾರ ಆರ್ಡರ್ ಮಾಡಿರುವುದು ಒಂದು ಕೋಟಿ ಲಸಿಕೆಗೆ ಅದು ಲಭ್ಯವಾಗುವುದು ಮೇ ಮೂರನೆ ವಾರದಲ್ಲಿ, ಆನಂತರವಷ್ಟೇ ಈ ವಯೋಮಾನದವರಿಗೆ ಲಸಿಕೆ ನೀಡಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಹಾಕಿಸಿಕೊಳ್ಳುವುದೇ ಅಂತಿಮ ಪರಿಹಾರ. ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಲೇ ಬೇಕು. ಆದುದರಿಂದ, ಲಸಿಕೆ ಹಾಕಿಸಿಕೊಳ್ಳಲು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿಕೊಳ್ಳುವುದಕ್ಕಿಂತ ಇಡೀ ದೇಶದಲ್ಲಿ ಲಸಿಕಾ ಅಭಿಯಾನ ವನ್ನು ಆರಂಭಿಸಬೇಕು. ಅಲ್ಲದೆ, 18 ವರ್ಷದ ಒಳಗಿರುವವರಿಗೆ ಯಾರಿಗೆ ಅಗತ್ಯ ಇದೆಯೋ ಅವರಿಗೂ ಲಸಿಕೆ ನೀಡಲು ಸರಕಾರ ಮುಂದಾಗಬೇಕು ಎಂದು ಅವರು ಹೇಳಿದರು.

ಕಳೆದ ಸಾಲಿನ ಅಕ್ಟೋಬರ್ ನಲ್ಲಿ 162 ಘಟಕಗಳಿಗೆ ಕೇಂದ್ರ ಸರಕಾರ ಟೆಂಡರ್ ಕರೆದಿತ್ತು. 8 ತಿಂಗಳ ಅವಧಿಯಲ್ಲಿ ಕೇವಲ 30 ಯೂನಿಟ್‍ಗಳು ಮಾತ್ರ ಕೆಲಸ ಪ್ರಾರಂಭ ಮಾಡಿವೆ. ಲಸಿಕೆ ಸಿದ್ಧಪಡಿಸುವ ಪ್ರಯತ್ನ ದೇಶದಲ್ಲೂ ಮಾಡಿಲ್ಲ, ರಾಜ್ಯದಲ್ಲೂ ಮಾಡಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರ ಲಸಿಕೆ ನೀಡುತ್ತೆ. 18-44 ವರ್ಷ ವಯೋಮಾನದವರಿಗೆ ರಾಜ್ಯ ಸರಕಾರ ಲಸಿಕೆ ನೀಡಬೇಕು. ಇದಕ್ಕೆ ಮೀನಾಮೇಷ ಎಣಿಸಬಾರದು. 45 ವರ್ಷ ಮೇಲ್ಪಟ್ಟವರಿಗೆ ಶೇ.20-25ರಷ್ಟು ಮಾತ್ರ ಲಸಿಕೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್-19 ಇಂದ ಮೃತಪಟ್ಟವರ ಬಗ್ಗೆಯೂ ಸುಳ್ಳು ಅಂಕಿ ಸಂಖ್ಯೆಗಳನ್ನು ಕೊಡುತ್ತಿದ್ದಾರೆ. ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆ ಮಾಡಲು ಆಗಿಲ್ಲ. ರಾಜ್ಯದಲ್ಲಿ ಅರಾಜಕತೆ ಇದೆ. ಆಡಳಿತ ವ್ಯವಸ್ಥೆ ಇಲ್ಲ. ಜನ ಇವರ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 48 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಕರ್ಫ್ಯೂ ಮಾಡಿ 4 ದಿನ ಆಗಿದೆ. ಅದರ ಪರಿಣಾಮ ಏನು ಅನ್ನೊದು ಸರಕಾರಕ್ಕೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಸರಕಾರಕ್ಕೆ ಈ ಸೋಂಕಿನ ವಿರುದ್ಧ ಹೋರಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲ ಅಧಿಕಾರ ಬಿಟ್ಟು ಹೋಗಲಿ, ಜನರನ್ನು ಸಾಯಿಸೋದು ಬೇಡ. ಕಾಂಗ್ರೆಸ್ ಕಚೇರಿಯಿಂದ ಎಲ್ಲ ನಾಯಕರು ಏನೆಲ್ಲ ಸಹಾಯಹಸ್ತ ಚಾಚಬೇಕು ಅದನ್ನು ಮಾಡುತ್ತೇವೆ. ಆಂಬ್ಯುಲೆನ್ಸ್ ಗಳನ್ನು ನೀಡುತ್ತಿದ್ದೇವೆ. ಸಹಾಯವಾಣಿ, ವಾರ್ ರೂಂ ತೆರೆದಿದ್ದೇವೆ. ಕಷ್ಟದ ದಿನಗಳಲ್ಲಿ ಜನರ ಜೊತೆ ನಿಲ್ಲಲು ನಿರ್ಧರಿಸಿದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ಹಾಗೂ ಮುಖ್ಯಮಂತ್ರಿ ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಲಾಕ್‍ಡೌನ್ ಘೋಷಣೆಯಿಂದ ಬಡವರು ತಣ್ಣೀರು ಬಟ್ಟೆ ಹಾಕಿಕೊಂಡು ಇರಬೇಕು. ಪ್ರತಿದಿನ ಇದನ್ನು ಹೇಳುತ್ತಲೇ ಇದ್ದೇನೆ. ಆದರೆ, ಈವರೆಗೆ ಸರಕಾರದಿಂದ ಯಾವುದೆ ಪ್ರತಿಕ್ರಿಯೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಮ್ ಅಹ್ಮದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ, ಮುಹಮ್ಮದ್ ಹಾರಿಸ್ ನಲಪಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi