ಕುಕನೂರು : ಪಟ್ಟಣದ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಗುದ್ನೇಶ್ವರ ಮಠದ ರುದ್ರಮುನೀಶ್ವರ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಹುಬ್ಬಳ್ಳಿ-ಧಾರವಾಡ ಭಾಗದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಪಟ್ಟಣದ ಗುದ್ನೇಪ್ಪನ ಮಠದ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಕ್ತರು ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಗದಗ ಜಿಲ್ಲೆಯ ನೀಲಗುಂದ ಗ್ರಾಮದ ಭಕ್ತರಾದ ಬಸಪ್ಪ ಪೂಜಾರ್ ಹಾಗೂ ಪ್ರಭು ಅಂಗಡಿ ಮಾತನಾಡಿ, 2023ರಲ್ಲಿ ಸರ್ವೇ ನಂ.78ರಲ್ಲಿ ಇರುವ ಮಠದ 26 ಎಕರೆ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಕ್ರಮದ ವಿರುದ್ಧ 18 ಸೇವಾದಾರರು ನ್ಯಾಯಾಲಯದ ಮೊರೆ ಹೋಗಿದ್ದು, ಭೂ ನ್ಯಾಯಮಂಡಳಿ 40 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಆದೇಶ ನೀಡಿದೆ. ಪ್ರಕರಣ ಧಾರವಾಡ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಪ್ರಸ್ತುತ ಸ್ಟೇ ಆದೇಶ ಜಾರಿಯಲ್ಲಿದೆ ಎಂದರು.
ಇದಾದ ಬಳಿಕವೂ ಮತ್ತೆ 17 ಎಕರೆ ಭೂಮಿಯಲ್ಲಿ ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಪ್ರಭು ಅಂಗಡಿ ಮಾತನಾಡಿ, ಶಾಸಕರು ಐದು ವರ್ಷಕ್ಕೊಮ್ಮೆ ಬದಲಾಗುತ್ತಾರೆ; ಆದರೆ ಭಕ್ತರು ಶಾಶ್ವತ. ನ್ಯಾಯಾಲಯದ ಅಂತಿಮ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಆದರೆ ತೀರ್ಪು ಬರುವ ಮೊದಲು ಯಾವುದೇ ಕಾಮಗಾರಿಗಳು ನಡೆಯಬಾರದು," ಎಂದು ಹೇಳಿದರು.
ಮಠದ ಭೂಮಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮೀಸಲಿಟ್ಟಿರುವುದರಿಂದ ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. "ಪ್ರಾಣ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ," ಎಂದು ಭಕ್ತರು ಎಚ್ಚರಿಕೆ ನೀಡಿದರು.
ಈಗಾಗಲೇ ಮಠದ 214 ಎಕರೆ ಭೂಮಿಯಲ್ಲಿ ನವೋದಯ ಶಾಲೆ, ಐಟಿಐ ಕಾಲೇಜು, ಮುರಾರ್ಜಿ ಶಾಲೆ, ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡಿವೆ. ಉಳಿದ ಭೂಮಿಯಲ್ಲಿಯೂ ಕಟ್ಟಡ ನಿರ್ಮಾಣ ಮಾಡಿದರೆ ಜಾತ್ರೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ ಎಂದು ಹೇಳಿದರು.
ಗ್ರಾಮದಲ್ಲಿ ಅನಗತ್ಯ ಭೂ ಮತ್ತು ಮನೆಗಳ ಸರ್ವೇ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಲಾಗುತ್ತಿದೆ ಎಂದು ದೂರಿದರು.
ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು. ಇಲ್ಲವಾದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಸರ್ಕಾರ ಮತ್ತು ಜಿಲ್ಲಾ ಆಡಳಿತವೇ ಹೊಣೆ ಎಂದು ಭಕ್ತರು ಎಚ್ಚರಿಸಿದರು.
ಬಳಿಕ ಭಕ್ತರು ಕುಕನೂರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

