Dailyhunt
ಕುಂದಾಪುರ| ಉಡುಪಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ

ಕುಂದಾಪುರ| ಉಡುಪಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ

ಕುಂದಾಪುರ, ಎ.2: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಸಹಯೋಗದೊಂದಿಗೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ- 2026ನ್ನು ಗುರುವಾರ ಆಯೋಜಿಸಲಾಗಿತ್ತು.

ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಉದ್ಯೋಗದಾತರೇ ಉದ್ಯೋಗಾಕಾಂಕ್ಷಿಗಳ ಬಳಿಗೆ ಬಂದಾಗ ಅದರ ಸಂಪೂರ್ಣ ಪ್ರಯೋಜವನ್ನು ಪಡೆದು ಕೊಳ್ಳಬೇಕು. ಉದ್ಯೋಗ ಮೇಳಕ್ಕೆ ಬಂದ ಕೆಲವರಿಗೆ ಕೆಲಸ ಸಿಕ್ಕಿದರೂ, ಅದು ಒಳ್ಳೆಯ ಬೆಳವಣಿಗೆ. ಉದ್ಯೋಗ ಮೇಳದ ಪ್ರಯೋಜವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಸುವ ಸಂಸ್ಥೆಗಳು ಉದ್ಯೋಗ ಮೇಳಕ್ಕೆ ಸಹಕಾರ ನೀಡುತ್ತಿರು ವುದು ಖುಷಿಯ ವಿಷಯ. ಈ ಉದ್ಯೋಗ ಮೇಳದ ಫಲಿತಾಂಶ ಹೆಚ್ಚಾಗ ಬೇಕು, ನಮ್ಮೂರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು ಎಂದರು.

ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮುಖ್ಯ ಯೋಜನಾಧಿಕಾರಿ ಉದಯ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ವಿಜಯ ಕುಮಾರ್, ಕುಂದಾಪುರ ತಾಪಂ ಇಒ ಮಹೇಶ ಕೆ.ಜಿ., ಬೈಂದೂರು ತಾಪಂನ ಇಒ ರಾಮದಾಸ, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು, ಆಡಳಿತ ಮಂಡಳಿ ಕಾರ್ಯದರ್ಶಿ ಯು.ಎಸ್.ಶೆಣೈ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಗೊಂಡ, ತಾಲೂಕು ಸಂಜೀವಿನ ಒಕ್ಕೂಟದ ಮೈತ್ರಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪಿಡಿಒ ಸತೀಶ್ ವಡ್ಡರ್ಸೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ವಂದಿಸಿದರು.

3 ಸಾವಿರ ಆಕಾಂಕ್ಷಿಗಳು, 80 ಕಂಪೆನಿಗಳು

ಉದ್ಯೋಗ ಮೇಳದಲ್ಲಿ ಸುಮಾರು 20 ವಲಯಗಳಿಂದ 80ಕ್ಕೂ ಮಿಕ್ಕಿ ಕಂಪೆನಿಗಳು ಪಾಲ್ಗೊಂಡಿದ್ದು, 3 ಸಾವಿರಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಂಡರು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲೇ ಅರ್ಹತಾ ಹಾಗೂ ನೇಮಕಾತಿ ಪತ್ರ ವಿತರಿಸಲಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi