Dailyhunt Logo
  • Light mode
    Follow system
    Dark mode
    • Play Story
    • App Story
Kundapura | ಶೂಟೌಟ್ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಡೆರಿಕ್ ಗಾಗಿ ತೀವ್ರ ಶೋಧ

Kundapura | ಶೂಟೌಟ್ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಡೆರಿಕ್ ಗಾಗಿ ತೀವ್ರ ಶೋಧ

ಕುಂದಾಪುರ: ನಗರದ ಹೋಲಿ ರೊಸಾರಿಯೋ ಚರ್ಚ್ ಎದುರು ಶುಕ್ರವಾರ ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಮೂಲತಃ ಹೆಬ್ರಿ, ಪ್ರಸ್ತುತ ಬಾರ್ಕೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ ಎಂಬವರನ್ನು ಇಂದು ಮುಂಜಾನೆ ದುಷ್ಕರ್ಮಿಯೋರ್ವ ಗುಂಡಿಕ್ಕಿ ಹತ್ಯೆಗೈದು ಬಳಿಕ ತಲೆಮರೆಸಿಕೊಂಡಿದ್ದಾನೆ. ಕೊಲೆ ಆರೋಪಿಯನ್ನು ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ' ಎಂದು ಐವನ್ ರಿಚರ್ಡ್ ಮಸ್ಕರೇನಸ್ ರಿಗೆ ಆರೋಪಿ ಡೆರಿಕ್ ಮೆಸೇಜ್ ಹಾಕಿ ಲೊಕೇಶನ್ ಕಳುಸಿದ್ದನೆನ್ನಲಾಗಿದೆ. ಅದರಂತೆ ಲೊಕೇಶನ್ ಆಧರಿಸಿ ಐವನ್ ತನ್ನ ಜೊತೆಗೆ ಏಳುವರ್ಷದಿಂದ ಇದ್ದ ಮಹಿಳೆಯೋರ್ವರ ಜೊತೆ ಇಂದು ಮುಂಜಾನೆ ಕಾರಿನಲ್ಲಿ ಕುಂದಾಪುರಕ್ಕೆ ಆಗಮಿಸಿ ಇಲ್ಲಿನ ಚರ್ಚ್ ರಸ್ತೆಯ ಹೋಲಿ ರೊಸಾರಿಯೋ ಚರ್ಚ್ ಎದುರಿನ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಮುಂಜಾನೆ ಸುಮಾರು 3:15ಕ್ಕೆ ಆರೋಪಿ ಡೆರಿಕ್ ಕಾರಿನಲ್ಲಿ ಅಲ್ಲಿಗೆ ಆಗಮಿಸಿದ್ದಾನೆ. ಈ ವೇಳೆ ಕಾರಿನಿಂದ ಇಳಿದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಆರೋಪಿ ಐವನ್ ಗುಂಡಿಕ್ಕಿ ಕಾರನ್ನೇರಿ ಪರಾರಿಯಾಗಿದ್ದಾನೆನ್ನಲಾಗಿದೆ.

ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಐವನ್ ರಸ್ತೆಯಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಐವನ್ ಮತ್ತು ಡೆರಿಕ್ ಮಧ್ಯೆ ಇದ್ದ ಹಣಕಾಸಿನ ಹಾಗೂ ಇತರ ವ್ಯವಹಾರದ ವಿಚಾರದಲ್ಲಿದ್ದ ಮನಸ್ತಾಪವೇ ಕೊಲೆಗೆ ಕಾರಣ ಎನ್ನಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi