Sunday, 09 May, 5.34 pm ವಾರ್ತಾಭಾರತಿ

ಮುಖಪುಟ
ಮಾಜಿ ಸಂಸದ ಕೆ. ಬಿ. ಶಾಣಪ್ಪ ಕೋವಿಡ್ ಗೆ ಬಲಿ

ಕಲಬುರ್ಗಿ, ಮೇ 9: ಕೋವಿಡ್ ಸೋಂಕಿಗೊಳಗಾಗಿದ್ದ ಮಾಜಿ ಸಂಸದ ಕೆ.ಬಿ. ಶಾಣಪ್ಪ (79) ಅವರು ರವಿವಾರ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.

ಇತ್ತೀಚಿಗೆ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆನಂತರ ಸೋಂಕು ದೃಢಪಟ್ಟ ಕಾರಣ ನಾಲ್ಕೈದು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೂಲತಃ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಶಾಣಪ್ಪ ಅವರು ಕಲಬುರ್ಗಿ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ವಾಡಿಯ ಎಸಿಸಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿದ್ದ ಶಾಣಪ್ಪ ಅಂದಿನ ಶಹಾಬಾದ್ ವಿಧಾನಸಭಾ ಕ್ಷೇತ್ರದಿಂದ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಬಳಿಕ ಜೆ.ಎಚ್.ಪಟೇಲ್ ಸಂಪುಟದಲ್ಲಿ ಅಬಕಾರಿ ಸಚಿವರಾದರು. ಆ ಸಂದರ್ಭ, ಶಾಸಕರಾಗಿಲ್ಲದ ಕಾರಣ ಅವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಲಾಗಿತ್ತು.

ನಂತರ ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ

ಸಂತಾಪ: ಕೆ.ಬಿ. ಶಾಣಪ್ಪ ಅವರ ನಿಧನದಿಂದ ಒಬ್ಬ ನೇರ ನಿಷ್ಠುರ ಸ್ವಭಾವದ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಹಿರಿಯ ಮುತ್ಸದ್ದಿ ರಾಜಕಾರಣಿ ಕೆ.ಬಿ.ಶಾಣಪ್ಪನವರು ಕೋವಿಡ್ ಸೋಂಕಿನಿಂದ ನಿಧನರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ ಎಂದಿದ್ದಾರೆ.

ಅತ್ಯಂತ ಆತ್ಮೀಯರು, ಹಿತೈಷಿಯಾದ ಶಾಣಪ್ಪನವರು ಮೃತಪಟ್ಟಿರುವ ಸುದ್ದಿ ಅತೀವ ಆಘಾತ ತಂದಿದೆ. ಕಾಮ್ರೇಡ್ ದಿನಗಳಿಂದಲೂ ಅವರೊಂದಿಗಿನ ಒಡನಾಟ ನನ್ನ ಹೃದಯದಲ್ಲಿ ಅಜರಾಮರ. ಸದಾ ಜನರಿಗಾಗಿ ಮಿಡಿಯುತ್ತಿದ್ದ ಈ ಜೀವ ಇಲ್ಲವಾಗಿರುವುದು ಭರಿಸಲಾಗದ ನಷ್ಟ. ಇವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಸಿಗುವಂತಾಗಲಿ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top