Dailyhunt
ಮಧ್ಯಪ್ರಾಚ್ಯ ಸಂಘರ್ಷ| ಮಧ್ಯಸ್ಥಿಕೆ ಪ್ರಯತ್ನಕ್ಕೆ ಹಿನ್ನಡೆ ಕುರಿತ ವರದಿ ನಿರಾಕರಿಸಿದ ಪಾಕಿಸ್ತಾನ

ಮಧ್ಯಪ್ರಾಚ್ಯ ಸಂಘರ್ಷ| ಮಧ್ಯಸ್ಥಿಕೆ ಪ್ರಯತ್ನಕ್ಕೆ ಹಿನ್ನಡೆ ಕುರಿತ ವರದಿ ನಿರಾಕರಿಸಿದ ಪಾಕಿಸ್ತಾನ

ಸ್ಲಮಾಬಾದ್, ಎ.4: ಪಶ್ಚಿಮ ಏಶ್ಯಾದಲ್ಲಿ ಮುಂದುವರಿದಿರುವ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ-ಇರಾನ್ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ತನ್ನ ಉಪಕ್ರಮಕ್ಕೆ ಹಿನ್ನಡೆಯಾಗಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪಾಕಿಸ್ತಾನ ಶನಿವಾರ ತಿರಸ್ಕರಿಸಿದೆ.

` ಪ್ರದೇಶದಲ್ಲಿನ ಸಂಘರ್ಷದ ಕುರಿತು ಮತ್ತು ಶಾಂತಿ ಹಾಗೂ ಮಾತುಕತೆಯನ್ನು ಉತ್ತೇಜಿಸಲು ಪಾಕ್ ಸರಕಾರದ ಪ್ರಯತ್ನಗಳ ಬಗ್ಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮಗಳಲ್ಲಿನ ಹಲವು ವರದಿಗಳನ್ನು ನಾವು ಗಮನಿಸಿದ್ದೇವೆ. ಇದು ಕಲ್ಪಿತ ಮತ್ತು ಆಧಾರರಹಿತ ವರದಿಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಪ್ರಾದೇಶಿಕ ಸೂಕ್ಷ್ಮತೆ ಉತ್ತುಂಗಕ್ಕೇರಿದ ಸಮಯದಲ್ಲಿ ರಾಜತಾಂತ್ರಿಕತೆಗೆ ವಿವೇಚನೆ ಮತ್ತು ಜವಾಬ್ದಾರಿ ಎರಡೂ ಬೇಕಾಗುತ್ತದೆ. ಶುಕ್ರವಾರ ವಿದೇಶಾಂಗ ಇಲಾಖೆ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ನೀಡಲಾಗಿದ್ದ ಮಾಹಿತಿಯನ್ನು ತಿರುಚಿ ವರದಿ ಮಾಡಲಾಗಿದೆ. ವದಂತಿ ಮತ್ತು ಊಹಾಪೋಹಗಳಿಗೆ ಗಮನ ನೀಡದೆ ಅಧಿಕೃತವಾಗಿ ನೀಡಿದ ಹೇಳಿಕೆಯ ಬಗ್ಗೆ ಮಾತ್ರ ಮಾಧ್ಯಮಗಳು ಗಮನ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.

ಶುಕ್ರವಾರ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ನಡೆಸಿದ್ದ ಸುದ್ದಿಗೋಷ್ಟಿಯಲ್ಲಿ ` ಅಮೆರಿಕ ಮತ್ತು ಇರಾನ್ ನಡುವೆ ಸಂದೇಶಗಳು ವಿನಿಮಯಗೊಂಡಿದ್ದರೂ ಇರಾನ್‍ನಿಂದ ಸ್ಪಷ್ಟ ಪ್ರತಿಕ್ರಿಯೆಯ ಕೊರತೆಯು ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ. ನೌಕಾಪಡೆ, ವಾಯುಪಡೆ ಹಾಗೂ ಇತರ ಮಿಲಿಟರಿ ಹಾಗೂ ನಾಗರಿಕ ಮೂಲಸೌಕರ್ಯಗಳಿಗೆ ಅಗಾಧ ಪ್ರಮಾಣದ ಹಾನಿ ಸಂಭವಿಸಿದ್ದರೂ ಇರಾನ್ ಮಾತುಕತೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಪಾಕಿಸ್ತಾನ ಮತ್ತು ಚೀನಾಗಳು ಮಾತುಕತೆಗೆ ಮುಂದಾಗುವಂತೆ ಇರಾನ್ ಅನ್ನು ಆಗ್ರಹಿಸಿದ್ದರೂ ಇರಾನ್ ಇದುವರೆಗೆ ಭಾಗವಹಿಸಲು ತನ್ನ ಸಿದ್ಧತೆಯನ್ನು ತಿಳಿಸಿಲ್ಲ' ಎಂದು ಹೇಳಿರುವುದಾಗಿ `ಡಾನ್' ವರದಿ ಮಾಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi