ಬೆಂಗಳೂರು : 'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಅರಳು-ಮರಳು ರೀತಿ ಮಾತನಾಡಬಾರದು. ಇವರ ಮಾನಸಿಕ ಆರೋಗ್ಯ ಸರಿ ಇಲ್ಲ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬುಧವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಖಂಡನೀಯ. ದೇಶದಾದ್ಯಂತ ಜನರು ಇವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೊಲ್ಲಲು ಪ್ರಚೋದನೆ ನೀಡುವುದು ಸರಿ ಅಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಂಗೀಕಾರ ದೊರೆತಿದೆ. ಆ ಮಸೂದೆ ಅನ್ವಯ ಖರ್ಗೆ ರೀತಿ ಪ್ರಚೋದನಾಕಾರಿಯಾಗಿ ಮಾತನಾಡಿದರೆ ಪ್ರಕರಣ ದಾಖಲು ಮಾಡಬಹುದು. ಆದುದರಿಂದ ಬಿಜೆಪಿ ದೂರು ನೀಡಿದೆ. ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿಯ ಕಾರ್ಯಕರ್ತರು ಸಿಡಿದೆದ್ದು ಎಲ್ಲ ಕಡೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ರಝಾಕರಿಂದ ತಮ್ಮ ಕುಟುಂಬದ ಮೇಲೆ ದಾಳಿ ನಡೆದಿದೆ ಎಂದು ಖರ್ಗೆಯವರೇ ಹೇಳಿದ್ದಾರೆ. ತಮ್ಮ ಮನೆತನ ಹಾಳು ಮಾಡಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಬೆಂಬಲ ನೀಡಿದ್ದಾರೆ. ಇದು 'ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಇದ್ದಂತೆ'. ಇವರಿಬ್ಬರ ಮನಸ್ಥಿತಿ ಒಂದೇ ಆಗಿದೆ ಎಂದು ಅವರು ಟೀಕಿಸಿದರು.

