Dailyhunt Logo
  • Light mode
    Follow system
    Dark mode
    • Play Story
    • App Story
ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಮೂವರ ಬಂಧನ

ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಮೂವರ ಬಂಧನ

ಹೆಬ್ರಿ, ಜೂ.1: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತನಗರ ಎಸ್‌ಆರ್‌ಎಸ್ ಶಾಲೆಯ ಬಳಿಯ ಕೀರ್ತನ ಪ್ರಭು ಎಂಬವರ ಮನೆಯಲ್ಲಿ ಮೇ 24ರಂದು ನಡೆದ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡು ಚೆನ್ನೈ ಪೆರೂರು ಮೂಲದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚರ್ಕಳ ಮುಟ್ಟತ್ತೋಡಿ ಚೆರಿಯಾಲಂಬಾಡಿ ನಿವಾಸಿ ಕಾಸರಗೋಡು ರಮ್ದೀನ್ ಸಲೀಂ, ಮೂಡಬಿದ್ರೆಯ ಮಿಜಾರು ಗ್ರಾಮದ ಹರೀಶ್ ಶೆಟ್ಟಿ ಮತ್ತು ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಸಫ್ವಾನ್ ಬಂಧಿತ ಆರೋಪಿಗಳು.

ಬಂಧಿತರಿಂದ 37,87,800ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ 4 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಆತನಿಂದ ಇನ್ನಷ್ಟು ಸೊತ್ತುಗಳನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೀರ್ತನ ಪ್ರಭು ಅವರ ಮನೆಗೆ ನುಗ್ಗಿದ ಕಳ್ಳರು, 49,42,000ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು 3,95,000ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಮತ್ತು 6,60,000ರೂ. ಮೌಲ್ಯದ ಚಿನ್ನದ ಹೊದಿಕೆ ಇರುವ ವಜ್ರದ ಆಭರಣ ಸಹಿತ 59,77,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ್ ಆದೇಶದಂತೆ ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧಿಕಾರಿ ಸುಧಾಕರ ಎಸ್.ನಾಯ್ಕ್ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ಎಸ್.ವಿಜಯಪ್ರಸಾದ್ ಮಾರ್ಗ ದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಮತ್ತು ಕಾರ್ಕಳ ವೃತ್ತ ಪ್ರಭಾರ ಸಿಪಿಐ ರಾಘವೇಂದ್ರ, ಹೆಬ್ರಿ ಠಾಣಾ ಎಸ್ಸೈಗಳಾದ ರವಿ ಬಿ.ಕೆ. ಮತ್ತು ಚಂದ್ರ ಎ.ಕೆ., ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್., ಶಿರ್ವ ಎಸ್ಸೈ ಮಂಜುನಾಥ ಮರಬದ, ಪಡುಬಿದ್ರಿ ಎಸ್ಸೈ ರಾಜೇಶ್ ಪಿ. ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹೆಬ್ರಿ ಪೊಲೀಸ್ ಠಾಣಾ ಸಿಬ್ಬಂದಿ ರಾಜ ಕುಮಾರ, ಅವಿನಾಶ್, ಕಿರಣ್, ಅಜೆಕಾರು ಪೊಲೀಸ್ ಠಾಣಾ ಸಿಬ್ಬಂದಿ ಸತೀಶ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಸಿದ್ದರಾಯಪ್ಪ, ಸಂತೋಷ, ತನಿಖಾ ಸಹಾಯಕರಾಗಿ ಹೆಬ್ರಿ ಪೊಲೀಸ್ ಠಾಣಾ ಸಿಬ್ಬಂದಿ ರಘು ಮೊಘವೀರ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಶಶಿಕುಮಾರ್, ಕಾರ್ಕಳ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಶಿವಾನಂದ ಪೂಜಾರಿ ಭಾಗವಹಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್, ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ನಿರೀಕ್ಷಕಿ ಎಲ್.ಮೋಹನ ಕುಮಾರಿ ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ.

ರಬ್ದಿನ್ ಸಲೀಂ 2013ರಲ್ಲಿ ಉತ್ತರ ಕನ್ನಡ ಜಿಲ್ಲೆ ಅಂಕೋಲ ವ್ಯಾಪ್ತಿಯಲ್ಲಿ ನಡೆದ ಆರ್.ಎನ್.ನಾಯಕ್ ಕೊಲೆ, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಹರೀಶ್ ಶೆಟ್ಟಿ ವಿರುದ್ಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಹಾಗು ಮಾದಕ ದ್ರವ್ಯ ಸೇವನೆ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi