Dailyhunt
ಮಂಗಳೂರು| ಆರಿಫ್ ಕೊಲೆ ಪ್ರಕರಣ: ಏಳು ಮಂದಿ ಆರೋಪಿಗಳ ಬಂಧನ

ಮಂಗಳೂರು| ಆರಿಫ್ ಕೊಲೆ ಪ್ರಕರಣ: ಏಳು ಮಂದಿ ಆರೋಪಿಗಳ ಬಂಧನ

ಮಂಗಳೂರು: ರೌಡಿ ಶೀಟರ್, ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳಾದ ರಿಫಾತ್ , ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ , ರಿಝ್ವಾನ್ ಹಾಗೂ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ವಿಚಾರಣೆಯಿಂದ ಕೃತ್ಯದ ಭೀಕರತೆ ಹಾಗೂ ಅದರ ಹಿಂದಿರುವ ವ್ಯವಸ್ಥಿತ ಸಂಚು ಬಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಾ.27ರಂದು ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರಿಫ್‌ನನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿರುವ ಪ್ರಕರಣವು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ , ರಿಝ್ವಾನ್ ಸೇರಿದಂತೆ ಆರು ಮಂದಿ ಆರೋಪಿಗಳು ಕಾರಿನಲ್ಲಿ ಆರಿಫ್‌ನ ಬೈಕನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ತೊಕ್ಕೊಟ್ಟು ಫ್ಲೈ ಓವರ್ ಬಳಿ ನಿರ್ಜನ ಪ್ರದೇಶ ದಲ್ಲಿ ಆರಿಫ್ ಸಂಚರಿಸುತ್ತಿದ್ದ ಬೈಕ್‌ಗೆ ಆರೋಪಿಗಳು ಹಿಂದಿನಿಂದ ಕಾರನ್ನು ಢಿಕ್ಕಿ ಹೊಡೆದ ಪರಿಣಾಮವಾಗಿ ಆರಿಫ್ ಕೆಳಗೆ ಬೀಳುತ್ತಿದ್ದಂತೆ ಆತನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.

ಕೊಲೆಯ ಹಿಂದೆ ದೊಡ್ಡ ಜಾಲ ಕೆಲಸ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗೆ ಕೊಲೆಗಿಂತ ಮೊದಲು ತಂಗಲು ವ್ಯವಸ್ಥೆ ಇರ್ಷಾದ್ ಮಾಡಿಕೊಟ್ಟಿದ್ದಲ್ಲದೆ, ಅವರನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಕೊಲೆಗೆ ಬಳಸಲಾದ ಬಾಡಿಗೆ ಕಾರನ್ನು ಸುಹೈಲ್ ವ್ಯವಸ್ಥೆ ಮಾಡಿದ್ದು, ಕಾರನ್ನು ರಿಫಾತ್‌ಗೆ ನೀಡಿ ಈತ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಅರ್ಶದ್ ಎಂಬಾತ ಈ ತಂಡಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದನು. ಪೊಲೀಸರ ಚಲನವಲನದ ಮೇಲೆ ನಿಗಾ ಇರಿಸಿ, ಆರೋಪಿಗಳಿಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದನು. ಅಲ್ಲದೆ ಆರೋಪಿಗಳು ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅವರಿಗೆ ಹಣಕಾಸು ಮತ್ತು ವಾಹನದ ವ್ಯವಸ್ಥೆ ಮಾಡಿದ್ದನು ಎನ್ನಲಾಗಿದೆ.

ಡಿಜಿಟಲ್ ತಾಂತ್ರಿಕ ನೆರವು: ತಾಂತ್ರಿಕವಾಗಿ ಪೊಲೀಸರ ಕಣ್ಣು ತಪ್ಪಿಸಲು ಅಶ್ವೀರ್ ಎಂಬಾತ ನೆರವಾಗಿದ್ದನು. ಈತ ದುಬೈನಿಂದ ಒಟಿಪಿ ಪಡೆದು ಆರೋಪಿಗಳಿಗೆ ಅಂತರ್‌ ರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳನ್ನು ಸಕ್ರಿಯಗೊಳಿಸಿ ಕೊಟ್ಟಿದ್ದನು. ಒಂದು ನಂಬರ್ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಮತ್ತೊಂದು ನಂಬರ್ ನೀಡಿ ಸಂವಹನ ಮುಂದುವರಿಯುವಂತೆ ನೋಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಆರ್ಥಿಕ ನೆರವು: ವಿದೇಶದಲ್ಲಿರುವ ಮುಸ್ತಫಾ ಮತ್ತು ಅಶ್ವೀರ್ ಆರೋಪಿಗಳ ತಲೆಮರೆಸಿಕೊಳ್ಳಲು ವಸತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬೇಕಾದ ಹಣಕಾಸಿನ ನೆರವು ನೀಡುತ್ತಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಹತ್ಯಾ ಪ್ರಕರಣದಲ್ಲಿ ಇನ್ನೂ ಅನೇಕರು ಶಾಮೀಲಾಗಿರುವ ಸಂಶಯವಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi