ಮಂಗಳೂರು: ನಗರದ ಕಾಲೇಜುಗಳ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಗಾಂಜಾ ಪೂರೈಸುತ್ತಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನವರಾಗಿದ್ದಾರೆ.
ಇವರು ರೂಮಿನಲ್ಲಿ ಉಳಿದುಕೊಂಡು ನಾನಾ ಕಡೆಯಿಂದ ಗಾಂಜಾ ಖರೀದಿಸಿ ರೂಮಿನಲ್ಲಿ ಅದನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಿಗೆ ತುಂಬಿಸಿ ವಿದ್ಯಾರ್ಥಿಗಳು ಮತ್ತಿತರರಿಗೆ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳ ಬಳಿಯಿದ್ದ ಗ್ರಾಹಕರ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ 6 ಕಾಲೇಜುಗಳ 40 ವಿದ್ಯಾರ್ಥಿಗಳು ಮತ್ತು 10 ಮಂದಿ ಇತರರಿದ್ದರು. ಆವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
*ಹೆತ್ತವರಿಂದ ಸುಳಿವು: ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಸಿಕ್ಕಿರುವುದಾಗಿ ವಿದ್ಯಾರ್ಥಿಯೊಬ್ಬನ ಹೆತ್ತವರು ತಮ್ಮ ಗಮನಕ್ಕೆ ತಂದಿದ್ದರು. ಅದರಂತೆ ತನಿಖೆ ನಡೆಸಿದಾಗ 5 ಮಂದಿ ವಿದ್ಯಾರ್ಥಿಗಳು ಗಾಂಜಾ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
*ವಿದ್ಯಾರ್ಥಿಗಳು ಮತ್ತವರ ಹೆತ್ತವರಿಗೆ ಕೌನ್ಸೆಲಿಂಗ್ ಮಾಡಲಾಗುವುದು. ಹೆತ್ತವರು ಮಕ್ಕಳ ನಡತೆ ಪರಿಶೀಲಿಸುತ್ತಿ ರಬೇಕು. ಬದಲಾವಣೆ ಕಂಡು ಬಂದರೆ ನಮಗೆ ತಿಳಿಸಬೇಕು. ಮಕ್ಕಳು ಹಾಸ್ಟೆಲ್‌ನಲ್ಲಿರದೆ ರೂಮ್‌ನಲ್ಲಿ ಉಳಿದು ಕೊಂಡಿದ್ದರೆ ಯಾಕೆ ರೂಮಿನಲ್ಲಿದ್ದಾರೆ? ಏನಾದರೂ ಸಮಸ್ಯೆ ಇದೆಯೇ? ಎಂದು ಕಾಲೇಜು ಮತ್ತು ಮನೆಯವರು ತಿಳಿದುಕೊಳ್ಳಬೇಕು. ಮಾಹಿತಿ ಅಥವಾ ಅನುಮಾನವಿದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಇದರಿಂದ ಸಕಾಲಕ್ಕೆ ಸಮಸ್ಯೆ ಪರಿಹರಿಸಲು ಸುಲಭವಾಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Varthabharathi