ಮಂಗಳೂರು, ಸೆ.24: ಕ್ಯಾನ್ಸರ್ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ತಲೆ ಹೊದಿಕೆ ತಯಾರಿಸಲು ತನ್ನ ಕೇಶವನ್ನು ದಾನ ಮಾಡಿದ್ದಾಳೆ 11 ವರ್ಷದ ಬಾಲಕಿ ಮಂಗಳೂರಿನ ಡಿಲ್ನಾ ರಾಜೇಶ್.
ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯದ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಡಿಲ್ನಾ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಕೂದಲು ಕಳೆದುಕೊಂಡ ಜನರಿಗೆ ವಿಗ್ ತಯಾರಿಸಲು ತಮ್ಮ ಕೇಶವನ್ನು ದಾನ ಮಾಡಿದ್ದಾಳೆ.
9ನೇ ವರ್ಷದಲ್ಲಿ ತನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಕೂದಲನ್ನು ಕತ್ತರಿಸದೆ ಬೆಳೆಸಲಾಯಿತು. ಜನವರಿ 14 ರಂದು ತನ್ನ 11ನೇ ಹುಟ್ಟುಹಬ್ಬದಂದು ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಕೋವಿಡ್ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ ಸಾಧ್ಯವಾಗಲಿಲ್ಲ. ಸೆಪ್ಟಂಬರ್ 22ರಂದು ತನ್ನ ಕೇಶವನ್ನು ಕೊಡುಗೆ ನೀಡಲಾಗಿದೆ ಎಂದು ಡಿಲ್ನಾ ಹೆತ್ತವರು ತಿಳಿಸಿದ್ದಾರೆ.
ಹೀಗೆ ಕತ್ತರಿಸಿದ ಕೇಶವನ್ನು ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್‌ಗಳನ್ನು ತಯಾರಿಸಿ ನೀಡುವ ಕೇರಳ ತ್ರಿಶೂರಿನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್‌ಗೆ ಕಳುಹಿಸಿಕೊಡಲಾಗಿದೆ.
ರೈಲು ಪ್ರಯಾಣದ ಸಮಯದಲ್ಲಿ, ತಿರುವನಂತಪುರಂ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿರುವ ಕೂದಲು ಉದುರುವ ಕ್ಯಾನ್ಸರ್ ರೋಗಿಗಳನ್ನು ನೋಡಿದ ಮೇಲೆ ಮನಸ್ಸಿನಲ್ಲಿ ಉಂಟಾದ ನಿರ್ಧಾರದಂತೆ ಕೇಶವನ್ನು ದಾನ ಮಾಡಲಾಯಿತು. ಹೊಸ ಕೂದಲು ಬೆಳೆದಾಗ ವಾಪಸ್ ನೀಡುವುದಾಗಿ ದಿಲ್ನಾ ಹೇಳುತ್ತಾಳೆ.
ಡಿಲ್ನಾ ಮಂಗಳೂರಿನ ಮಲಯಾಳ ಮನೋರಮಾ ಪತ್ರಿಕೆಯ ವರದಿಗಾರ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೆನೆಪೊಯ ಪದವಿ ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿಯ ಪುತ್ರಿ. ಇವರು ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಕಾಂಕೋಲ್ ನಿವಾಸಿಗಳಾಗಿದ್ದು, ಪ್ರಸಕ್ತ ಮಂಗಳೂರಿನ ಎಕ್ಕೂರಿನಲ್ಲಿ ನೆಲೆಸಿದ್ದಾರೆ.

